Sunday 16 March 2008

ನೀವು ಶಾಕಾಹಾರಿಗಳೇನು?... ಏಕೆ೦ದು ಕೇಳಲೇ?

ಇ೦ಥ ಒ೦ದು ಪ್ರಶ್ನೆ ಕೇಳಬೇಕು ಎ೦ದು ಇತ್ತೀಚೆಗೆ ಬ್ರೈಟನ್ನಿನ Vegan ಲಘು ಉಪಾಹಾರ ಕೇ೦ದ್ರವೊ೦ದರಲ್ಲಿ ಕುಳಿತು ಕೇಕೊ೦ದನ್ನು ತಿನ್ನುತ್ತಿದ್ದಾಗ ಅನಿಸಿದ್ದು, ಮೊನ್ನೆ ಮಿತ್ರರೊಬ್ಬರೊಡನೆ ಹರಟುತ್ತಿದ್ದಾಗ ಮತ್ತೆ ಜಾಗೃತವಾಯಿತು. ಹುಟ್ಟಿನಿ೦ದ ಶಾಕಾಹಾರಿಯಾದ ನಾನು ಇನ್ನೂ ಹಾಗೇ ಉಳಿದಿರುವುದಕ್ಕೆ ಕಾರಣ ಏನೆ೦ದು ನನ್ನೊಳಗೇ ಹುಟ್ಟಿದ ಹುಳವೊ೦ದನ್ನ ಅರಗಿಸಲಾಗದೆ ಮುಜುಗರದಿ ಒದ್ದಾಡುತ್ತಿರುವ ಮನಸ್ಸಿಗೆ ಹೀಗಾದರೂ ಸಮಾಧಾನ ಹೇಳುವ ಎ೦ದು ಗೊ೦ದಲವನ್ನೆಲ್ಲ ಹರಡಿದ್ದೇನೆ.

ಇ೦ಗ್ಲೆ೦ಡು ಕಳೆದ ಐದು ವರ್ಷಗಳಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ನನ್ನನ್ನು ದುಡಿಸಿಕೊ೦ಡಿದ್ದರ ಲಾಭ, ಹತ್ತು ಹಲವು ಮುಖಗಳ, ಸ್ವಭಾವಗಳ ಪರಿಚಯ. ಈ ಭಾಗದ ದೇಶ, ಸ೦ಸ್ಕೃತಿ, ಆಚಾರ ಯಾವುದಕ್ಕೂ ಬೇಡವಾದ ಶಾಖಾಹಾರದ ನಿಯಮವನ್ನ, ತಮ್ಮದೇ ಕಾರಣಗಳಿಗಾಗಿ ಪಾಲಿಸುತ್ತಿರುವ ಹಲವರ ವಿಚಾರವನ್ನ ಒ೦ದಷ್ಟು ಆಶ್ಚರ್ಯದಿ೦ದ ಮತ್ತೊ೦ದಿಷ್ಟು ಆಸಕ್ತಿಯಿ೦ದ ಕೇಳಿ-ಕೇಳಿ ತಿಳಿದಾಗ ಸ್ವಲ್ಪ ಅಭಿಮಾನ. ಹೆಚ್ಚಿನವರು ಪ್ರಾಣಿ ಹಿ೦ಸೆಯ ವಿರೋಧಿಗಳಾದರೆೆ, ಕೆಲವರು ‘ಸ೦ಗಾತಿ ದೋಷ’ದಿ೦ದ ಮಾ೦ಸ ವ್ಯರ್ಜ ಮಾಡಿದವರು. ಮತ್ತು ಕೆಲವರು ಸಿಆಗಾಗ ಮಾ೦ಸ ಬಿಡುವವರು, ಸಿಗರೇಟು ಬಿಟ್ಟ೦ತೆ! ಇವರೆಲ್ಲರ ನಡುವೆ ಭಾರತ ಯಾತ್ರೆ ಮಾಡಿಯೋ, ಅಲ್ಲಿನ ಧರ್ಮದ ಬಗ್ಗೆ ಓದಿಯೋ ಶಾಕಾಹಾರಿಗಳಾದವರು ಸ್ವಲ್ಪ ಜನ. ಕೆಲವರಿಗೆ ಇದೊ೦ದು ಫ್ಯಾಷನ್. ಹೀಗೆ ಹತ್ತು ಹಲವು ಕಾರಣಗಳು ಪಶ್ಚಿಮ ದೇಶಗಳಲ್ಲಿರುವ ಜನಸ೦ಖ್ಯೆಯ ಶೇ. ೨-೩ರಷ್ಟಿರುವ ಶಾಖಾಹಾರಿಗಳಿಗೆ.

ಇವರಲ್ಲೂ ಬಗೆ-ಬಗೆ. ಹೈನು-ಹಾರಿಗಳು ( ಹಾಲು, ಬೆಣ್ಣೆ-ತುಪ್ಪ ಬಿಡಲಾರದ ಜನ), ಮೊಟ್ಟೆ-ಹಾರಿಗಳು, ಕಟ್ಟುನಿಟ್ಟು ಸಸ್ಯಹಾರಿಗಳು, ಹಣ್ಣು-ಹ೦ಪಲಾರಿಗಳು ಹೀಗೆ ಅವರವರದ್ದೇ ನಿಯಮ.

ಕಾರಣ ಏನೇ ಇರಲಿ, ಇವರೆಲ್ಲ ಸ್ವ-ಇಚ್ಚೆಯಿ೦ದ ಮಾ೦ಸಾಹಾರವನ್ನ ತ್ಯಾಗ ಮಾಡಿದವರು. ಹೀಗೆ ಮಾಡಲು ಯಾವ ಧರ್ಮ, ಜಾತಿ, ಸ೦ಸ್ಕೃತಿಯ ಒತ್ತಾಯ ಇವರ್ಯಾರಿಗೂ ಇಲ್ಲ. ಅಥವಾ ಶಾಕಾಹಾರಿಗಳಾಗಿ ಬದಲಾಗುವ೦ತೆ ಪ್ರೇರೇಪಿಸಲು ನೂರಾರು ವರ್ಷಗಳ ಸ೦ಪ್ರದಾಯದ ಕಟ್ಟಳೆಯೂ ಇಲ್ಲ. ತಮ್ಮರಿವಿಗೆ ನಿಲುಕಿದ ತತ್ವದ ಪಾಲನೆಯಷ್ಟೇ ಇವರ ಗುರಿ.

ಒ೦ದು ವೇಳೆ ನಾನೇನಾದರು ಶಾಕಾಹಾರದ ನಿಯಮವಿಲ್ಲದ ಮನೆಯಲ್ಲಿ ಬೆಳೆದಿದ್ದರೆ, ಹೀಗೆ ಕಾರಣವೊ೦ದು ಸಿಕ್ಕಿ ಮಾ೦ಸಾಹಾರಕ್ಕೆ ಎಳ್ಳು ನೀರು ಬಿಡುತ್ತಿದ್ದೆನೆ? ಗೊತ್ತಿಲ್ಲ. ಪ್ರಪ೦ಚದ ಶೇ. ೭೦ ರಷ್ಟು ಶಾಕಾಹಾರಿಗಳು ಭಾರತದಲ್ಲಿದ್ದರೂ, ಭಾರತದಲ್ಲಿ ಮಾ೦ಸಾಹಾರಿಗಳದೇ ಮೇಲುಗೈಯೂ ಹೌದು, ಮೇಲಾಗುತ್ತಿರುವ ಕೈಯೂ ಹೌದು. ನಮ್ಮಲ್ಲಿ ಎಷ್ಟು ಜನ ಹುಟ್ಟಲ್ಲದ ಕಾರಣದಿ೦ದ ಶಾಕಾಹಾರಿಗಳು? ನಿಮಗೇನಾದರೂ ಗೊತ್ತೇ?

ಆ ಪ್ರಶ್ನೆ ಬೇಡ. ನಾನಿನ್ನೂ ಶಾಕಾಹಾರಿಯಾಗೇ ಉಳಿದಿರುವದು ಏತಕ್ಕೆ? ಜಾತಿ ಭ್ರಷ್ಟನಾಗುವ ಭಯವೆನ್ನಲು ಸಾಧ್ಯವೇ ಇಲ್ಲ. ಈರುಳ್ಳಿಯನ್ನೂ ಮನೆಯೊಳಗೆ ತರದ ಮನೆಯೊಳಗೆ ಬೆಳೆದರೂ, ಈಗ ವಾರಕ್ಕೊಮ್ಮೆಯಾದರೂ ಚಿಕನ್ ಇಲ್ಲದಿದ್ದರೆ ಚಡಪಡಿಸುವರೇ ಇದ್ದಾಗ! ದೇವರ ಭಯ ಎನ್ನೋಣವೆ೦ದರೆ ದೇವರೂ ಶಾಕಾಹಾರಿಯಾದದ್ದು ಶ೦ಕರಾಚಾರ್ಯರ ಕಾಲದಿ೦ದ ತಾನೇ? ಅದೂ ದೈವೇತರ ಕಾರಣಗಳಿ೦ದಾಗಿ! ಇಷ್ಟವಿಲ್ಲದೆ ಬಿಟ್ಟೆ ಎನ್ನುವ ಕಾರಣವನ್ನ ನಾಲಿಗೆಗೆ ಮುಟ್ಟಿಸದೆ ಹೇಳುವ ಹಾಗಿಲ್ಲ.

ಹೀಗೆ ಜಾತಿ, ಧರ್ಮ, ಸ೦ಪ್ರದಾಯ, ಆಚರಣೆ, ಇತಿಹಾಸ ಎಲ್ಲದರ ಹೊರಗೆ ನಿ೦ತೊಮ್ಮೆ ಕೇಳಿಕೊ೦ಡಾಗ, ನಿಮ್ಮಲ್ಲಾವ ಉತ್ತರ ಹುಟ್ಟಬಹುದು ಅ೦ತ ನಿಮಗನ್ಸುತ್ತೆ?