Sunday 13 March 2016

ಹಾರು ಮನವೇ

ಹಾರು ಮನವೇ ಹಾರು
ನಿಲುಕದಷ್ಟು ಎತ್ತರ
ಕಾಣದಷ್ಟು ದೂರ...

ರೂಪಿಸುತ ನಾಳೆಗಳನು,
ಮೂಡಿಸಿ ಹೊಸ ಅಕ್ಷರಗಳ
ನಿನ್ನೆ ಅಳಿಸಿದ ಹಾಳೆಗಳಲಿ.

ಹಾರುವೆ ನೀ ತೋರಿದೆಡೆಗೆ
ನೆಲವೆಲ್ಲೆಂಬ ಚಿಂತಿಲ್ಲ,
ನಲಿವಿರಲು ಇಂದಿಗೆ!

ಹಾರು ಮನವೇ ಹಾರು
ನಿಲುಕದಷ್ಟು ಎತ್ತರ
ಕಾಣದಷ್ಟು ದೂರ...





Sunday 14 February 2016

ವಿಲಿಯಂ ವರ್ಡ್ಸವರ್ತ (William Wordsworth) (1770-1850) ಇಂಗ್ಲೆಂಡಿನ ಬಹು ಪ್ರಸಿದ್ಧ ಕವಿ. ಅವನ ಡ್ಯಾಫೊಡಿಲ್ ಕವಿತೆ ಹೆಚ್ಚಿನವರ ಮನದಲ್ಲಿ ಇ೦ದಿಗೂ ಅವನ ನೆನಪನ್ನ ಉಳಿಸಿರುವ, ಬಹು ಜನರು ಮೆಚ್ಚಿದ ಕವಿತೆ. ಈ ಕವಿತೆಯ ಕನ್ನಡ ಅನುವಾದದ ಒಂದು ಪ್ರಯತ್ನ. ಜೊತೆಗೆ ಅವನ ಮನೆಯ ಮತ್ತು ಅವನ ಈ ಕವಿತೆಗೆ ಸ್ಪೂರಿ್ತಯಾದ ಉಲ್ಸವಾಟರ್ (uls water lake) ಕೆರೆಯ ಚಿತ್ರಗಳು ನಿಮಗಾಗಿ:

ಹಳದೀ ಹೂಗಳು........

ನಡೆದಿದ್ದೆ ನಾ ಒಂಟಿಯಾಗಿ, ಕಣಿವೆ-ಗುಡ್ಡಗಳ 
ಮೇಲೆ ಎತ್ತರದಲಿ ತೇಲುವ ಮೋಡವೊಂದರಂತೆ.
ಕಂಡೆನೊಮ್ಮೆಲೆ ಬಹುದೊಡ್ಡ, ಹೊಂಬಣ್ಣದ 
ಹಳದಿ-ಹೂಗಳ ಗುಂಪೊಂದ;
ಕೆರೆಯ ತಡಿಯಲಿ, ಮರಗಳಡಿಯಲಿ
ಪಟಪಟಿಸಿ ಕುಣಿಯುತಿದ್ದವವು ತಂಗಾಳಿಯಲಿ.

ಮಿಂಚುತ, ಹೊಳೆಯುವ ಆಕಾಶ ಗಂಗೆಯ
ನಿರಂತರ ನಕ್ಷತ್ರಗಳಂತೆ, ಹರಡಿದ್ದವವು
ಎಂದೂ ಮುಗಿಯದ ಸಾಲಿನಂತೆ, ಆ ದಡದಂಚಿನಲಿ:
ಹತ್ತು ಸಾವಿರವ ಕಂಡೆ ಒಂದೇ ನೋಟದಲಿ,
ನರ್ತಿಸುತ್ತಿದ್ದವವು ನಲಿವಿನಲಿ ತಲೆದೂಗಿ.

ಪಕ್ಕದ ನೀರ ಅಲೆಗಳೂ ಕುಣಿಯುತಿದ್ದವು; ಆದರೆ
ಹೂಗಳು ಹಿಂದಿಕ್ಕಿದ್ದವು ಮಿಂಚುವಲೆಗಳ ಹರ್ಷದಿಂದಲಿ:-
ಕವಿಯೊಬ್ಬಗೆ ಸಂತಸವಲ್ಲದೆ ಮತ್ತೇನು
ಉಲ್ಲಸಿತರ ಇಂತಹ ಸಂಗದಲ್ಲಿ:
ನೋಡಿದೆ---ನೋಡುತ್ತಲೇ ಇದ್ದೆ---ಒಂದಿಷ್ಟೂ ಯೋಚಿಸದೆ
ಏನು ಸಿರಿಯ ತಂದಿಹುದು ಹೂಗಳೀ ಆಟ ನನಗೆಂದು:

ಏಕೆಂದರೆ ಮಂಚದ ಮೇಲೆ ಸುಮ್ಮನೆಯೋ,
ಮನನ ಮಾಡುತ್ತಲೋ ಮಲಗಿದಾಗಲೆಲ್ಲ
ನನ್ನೊಳಗಣ್ಣ ಹೊಳಪಿಸುವವೀ ಹೂಗಳು
ಅದುವೇ ನನಗೆ ಏಕಾಂತದ ಪರಮಾನಂದ,
ಮತ್ತೆ ನನ್ನ ಹೃದಯ ಹರುಷದಿಂದ ತುಂಬಿ,
ಕುಣಿಯುವುದು ಹಳದೀ ಹೂಗಳೊಟ್ಟಿಗೆ.


(ವಿಲಿಯಂ ವರ್ಡ್ಸವರ್ತ, ೧೮೧೫)
ಅನುವಾದ: ಮುರಳಿ ಹತ್ವಾರ, ೨೦೧೬)


ವಿಲಿಯಂ ವರ್ಡ್ಸವರ್ತನ ಮನೆ, ಗ್ರಾಸಮೀರ್, ಇಂಗ್ಲೆಂಡ್(photo: murali hathwar)

ಉಲ್ಸ್ ವಾಟರ್ ಕೆರೆ(photo: murali hathwar)