Sunday 14 February 2016

ವಿಲಿಯಂ ವರ್ಡ್ಸವರ್ತ (William Wordsworth) (1770-1850) ಇಂಗ್ಲೆಂಡಿನ ಬಹು ಪ್ರಸಿದ್ಧ ಕವಿ. ಅವನ ಡ್ಯಾಫೊಡಿಲ್ ಕವಿತೆ ಹೆಚ್ಚಿನವರ ಮನದಲ್ಲಿ ಇ೦ದಿಗೂ ಅವನ ನೆನಪನ್ನ ಉಳಿಸಿರುವ, ಬಹು ಜನರು ಮೆಚ್ಚಿದ ಕವಿತೆ. ಈ ಕವಿತೆಯ ಕನ್ನಡ ಅನುವಾದದ ಒಂದು ಪ್ರಯತ್ನ. ಜೊತೆಗೆ ಅವನ ಮನೆಯ ಮತ್ತು ಅವನ ಈ ಕವಿತೆಗೆ ಸ್ಪೂರಿ್ತಯಾದ ಉಲ್ಸವಾಟರ್ (uls water lake) ಕೆರೆಯ ಚಿತ್ರಗಳು ನಿಮಗಾಗಿ:

ಹಳದೀ ಹೂಗಳು........

ನಡೆದಿದ್ದೆ ನಾ ಒಂಟಿಯಾಗಿ, ಕಣಿವೆ-ಗುಡ್ಡಗಳ 
ಮೇಲೆ ಎತ್ತರದಲಿ ತೇಲುವ ಮೋಡವೊಂದರಂತೆ.
ಕಂಡೆನೊಮ್ಮೆಲೆ ಬಹುದೊಡ್ಡ, ಹೊಂಬಣ್ಣದ 
ಹಳದಿ-ಹೂಗಳ ಗುಂಪೊಂದ;
ಕೆರೆಯ ತಡಿಯಲಿ, ಮರಗಳಡಿಯಲಿ
ಪಟಪಟಿಸಿ ಕುಣಿಯುತಿದ್ದವವು ತಂಗಾಳಿಯಲಿ.

ಮಿಂಚುತ, ಹೊಳೆಯುವ ಆಕಾಶ ಗಂಗೆಯ
ನಿರಂತರ ನಕ್ಷತ್ರಗಳಂತೆ, ಹರಡಿದ್ದವವು
ಎಂದೂ ಮುಗಿಯದ ಸಾಲಿನಂತೆ, ಆ ದಡದಂಚಿನಲಿ:
ಹತ್ತು ಸಾವಿರವ ಕಂಡೆ ಒಂದೇ ನೋಟದಲಿ,
ನರ್ತಿಸುತ್ತಿದ್ದವವು ನಲಿವಿನಲಿ ತಲೆದೂಗಿ.

ಪಕ್ಕದ ನೀರ ಅಲೆಗಳೂ ಕುಣಿಯುತಿದ್ದವು; ಆದರೆ
ಹೂಗಳು ಹಿಂದಿಕ್ಕಿದ್ದವು ಮಿಂಚುವಲೆಗಳ ಹರ್ಷದಿಂದಲಿ:-
ಕವಿಯೊಬ್ಬಗೆ ಸಂತಸವಲ್ಲದೆ ಮತ್ತೇನು
ಉಲ್ಲಸಿತರ ಇಂತಹ ಸಂಗದಲ್ಲಿ:
ನೋಡಿದೆ---ನೋಡುತ್ತಲೇ ಇದ್ದೆ---ಒಂದಿಷ್ಟೂ ಯೋಚಿಸದೆ
ಏನು ಸಿರಿಯ ತಂದಿಹುದು ಹೂಗಳೀ ಆಟ ನನಗೆಂದು:

ಏಕೆಂದರೆ ಮಂಚದ ಮೇಲೆ ಸುಮ್ಮನೆಯೋ,
ಮನನ ಮಾಡುತ್ತಲೋ ಮಲಗಿದಾಗಲೆಲ್ಲ
ನನ್ನೊಳಗಣ್ಣ ಹೊಳಪಿಸುವವೀ ಹೂಗಳು
ಅದುವೇ ನನಗೆ ಏಕಾಂತದ ಪರಮಾನಂದ,
ಮತ್ತೆ ನನ್ನ ಹೃದಯ ಹರುಷದಿಂದ ತುಂಬಿ,
ಕುಣಿಯುವುದು ಹಳದೀ ಹೂಗಳೊಟ್ಟಿಗೆ.


(ವಿಲಿಯಂ ವರ್ಡ್ಸವರ್ತ, ೧೮೧೫)
ಅನುವಾದ: ಮುರಳಿ ಹತ್ವಾರ, ೨೦೧೬)


ವಿಲಿಯಂ ವರ್ಡ್ಸವರ್ತನ ಮನೆ, ಗ್ರಾಸಮೀರ್, ಇಂಗ್ಲೆಂಡ್(photo: murali hathwar)

ಉಲ್ಸ್ ವಾಟರ್ ಕೆರೆ(photo: murali hathwar)