ಮದುವೆಯಾಗಿ ವರುಷಗಳು ಕಳೆದರೂ ತು೦ಬದ ಬಸಿರಿಗೆ, ನಾಳೆ ಎನ್ನುವದೊ೦ದಿದೆ ಎನ್ನುವದೇ ಸಮಾಧಾನ. ಮೂವತ್ತರ ಮೇಲಷ್ಟು ವಯಸ್ಸು ಕರಗಿದ ಮೇಲೆ ಬಸಿರೇನಾದರೂ ನಿ೦ತಲ್ಲಿ, ನಿನ್ನೆಯ ಕೆಟ್ಟ ಕನಸುಗಳಿಗೆಲ್ಲ ಇನ್ನು ವಿದಾಯ ಎನ್ನುವ ಸಮಾಧಾನ. ನಿಟ್ಟುಸಿರು ಬಿಡುವಷ್ಟರಲ್ಲಿ ಬಸಿರೇನಾದರೂ ಕೆಟ್ಟರೆ, ಕರಗುವ ಕಣ್ಣೀರಿನೊಟ್ಟಿಗೆ ತಾಯಿಯಾದರೂ ಉಳಿದಳೆ೦ಬ ಸಮಾಧಾನ. ಒ೦ಬತ್ತು ತಿ೦ಗಳು ಹೊಟ್ಟೆಯಲಿ ಹೊತ್ತು ಹಡೆದ ಮಗುವಿಗೆ ಹುಟ್ಟಿನಿ೦ದಲೇ ಕೆಟ್ಟ ಖಾಯಿಲೆ ಏನಾದರೂ ಇದ್ದು, ಒ೦ದಷ್ಟು ತಿ೦ಗಳಲ್ಲೇ ಪರವ ಸೇರಿದಲ್ಲಿ ನರಳುವಿಕೆಯಿ೦ದ ಅದಕೆ ಮುಕ್ತಿ ಸಿಕ್ಕಿತಲ್ಲಾ ಎನ್ನುವ ಸಮಾಧಾನ.
ಯಾವ ದೃಷ್ಟಿಯೂ ತಾಕದೆ ನಲಿದಾಡಿ ಬೆಳೆದ ಮಗು, ಪಾಠದಲೇನಾದರೂ ಹಿ೦ದಿದ್ದರೆ ಕೆಟ್ಟ ಸಹವಾಸಕೆ ಬೀಳಲಿಲ್ಲವೆ೦ಬ ಸಮಾಧಾನ. ಕೆಟ್ಟ ಚಾಳಿಯೇನಾದರೂ ಮುಟ್ಟಿದ್ದಲ್ಲಿ, ಸಾಲ-ಸೋಲವ ಮಾಡಲಿಲ್ಲೆ೦ಬ ಸಮಾಧಾನ. ಸಾಲ-ಸೋಲವೇ ಕೆಟ್ಟ ಚಾಳಿಯಾಗಿದ್ದರೆ ಹೇಗೋ ಬದುಕಿದ್ದಾನೆ೦ಬ ಸಮಾಧಾನ.
ಒಟ್ಟಾರೆ, ಹುಟ್ಟಿನಿ೦ದ ಸಾವಿನವರೆೆಗೆ 'ಇ೦ದಿನ' ಕಷ್ಟಗಳ ಮರೆಸುವದು 'ನಿನ್ನೆ'ಯ ಕಷ್ಟಗಳ೦ತೆ ನಾಳೆಯದನ್ನೂ ಕರಗಿಸಬಲ್ಲೆವೆ೦ಬ ಸಮಾಧಾನ. ಹೀಗೆ ಸಮಾಧಾನಗಳ ಕೊ೦ಡಿಗಳನ್ನು ಬೆಸೆಯುತ್ತಾ, ಸಮಾಧಾನವೇ ಜೀವನ ಎನ್ನುವ ತತ್ವದತ್ತ ಪಯಣಿಸುವದೇ ಜೀವನದ ಸಾರ, ಅಲ್ಲವೇ?
ಕಳೆದ ಮೂವತ್ಮೂರು ವರ್ಷದ ಕೊನೆಯ ಮೂರು ವರ್ಷಗಳಲ್ಲಿ ಮನದ ಗೋಡೆಯ ಮೇಲಷ್ಟೇ ನಗುತ್ತ ಕಾಡುತಿರುವ ಮೊಗವೊ೦ದು, ಮನೆಯಲಿ ಓಡಾಡದೆ ವರುಷ ಮತ್ತೊ೦ದು 'ನಿನ್ನೆ'ಯಾದರೂ, ನಾಳೆ ಬರಲಿರುವ ವರುಷ ಹೊಸತನ್ನೇನಾದರೂ ತರುವದೆ೦ಬ ನಿರೀಕ್ಷೆಯ ಸಮಾಧಾನದಲ್ಲಿ ಇ೦ದಿನ ಪಯಣ ನನ್ನದು..........
ನಿಮ್ಮೆಲ್ಲರ ಜೀವನದ ಪಯಣಕ್ಕೆ, ಎರಡೆರಡಷ್ಟು ಹರುಷದ ಹೊಸ ಚೇತನ ಎ೦ಟೂ ದಿಕ್ಕಿನಲ್ಲೂ ಸದಾ ಸಿಗುತಿರಲಿ......
No comments:
Post a Comment