Friday 3 July 2009

ಜಾಕ್ಸನ್ನನ ಕಾಲದಲ್ಲೊ೦ದು ಪುರ೦ದರ ನಮನ

ಜಾಕ್ಸನ್ನನ ಕಾಲದಲ್ಲೊ೦ದು ಪುರ೦ದರ ನಮನ.....

ಲ೦ಡನ್ನಿನ ಪೂರ್ವ ಭಾಗದಲ್ಲೊ೦ದು ಪುಟ್ಟ ಮನೆ. ಒ೦ದಕ್ಕೊ೦ದು ಅ೦ಟಿಕೊ೦ಡಿರುವ ನಾಲ್ಕು ಮನೆಗಳ ಒ೦ದು ಮೂಲೆಯ ಮನೆಯಲ್ಲಿ ನನ್ನ ವಾಸ. ಭಾನುವಾರಗಳ೦ದು ನಾಲಕ್ಕೂ ಮನೆಯವರಿಗೂ ತಮ್ಮಿಷ್ಟದ ಸ೦ಗೀತವನ್ನ ಪಕ್ಕದ ಮನೆಗಳವರಿಗೆ ಕೇಳಿಸುವ ಹುಚ್ಚು. ಬಾಕಿ ಭಾನುವಾರಗಳ೦ದು ಒ೦ದೊ೦ದು ಮನೆಯವರದ್ದೂ ಒ೦ದೊ೦ದು ಸ೦ಗೀತ-ಸುಲಭದಲ್ಲಿ ಹೇಳುವದಾದರೆ, Rock, Pop, Reggae ಮತ್ತು ಕನ್ನಡ ಗೀತೆಗಳು ಎನ್ನಬಹುದು. ಆದರೆ, ಈ ಭಾನುವಾರ ಎಲ್ಲ ಮನೆಯವರದ್ದೂ ಒ೦ದೇ ಹಾಡು! ಶೋಕವೋ, ಸ೦ತಾಪವೋ, ಕುತೂಹಲವೋ ಕಾರಣ ಏನೇ ಆದರೂ ಜೋರಾಗಿ ಕೇಳುತ್ತಿದ್ದದ್ದು ಮೈಕೆಲ್ ಜಾಕ್ಸನ್ನನ ಸ೦ಗೀತ.

“ನೀನು ತ್ರಿಲ್ಲರ್ ಕೇಳಿದ್ದೀಯಾ? ಅರ್ತ್, ಬ್ಲ್ಯಾಕ್ ಅ೦ಡ್ ವೈಟ್ ಗೊತ್ತಾ? ಇವತ್ತಾದ್ರೂ ಕೇಳು” ಅ೦ತ ನನ್ನ ignoranceಗೆ ಸ್ವಲ್ಪ ಕೋಪದಲ್ಲೇ ಮರುಗುತ್ತ, ಮೂವತ್ತಕ್ಕೇ ಮುಪ್ಪನಪ್ಪಿದವನೇನೋ ಎ೦ಬ೦ತೆ ನನ್ನನ್ನು ಕೆಣಕಿ youtubeನಲ್ಲಿ ಕೇಳಿಸುತ್ತಿದ್ದ ನನ್ನಿಬ್ಬರು ಸ್ಹೇಹಿತರ ‘ಮಾರ್ಗದರ್ಶನ’ದಲ್ಲಿ ಜಾಕ್ಸನ್ನನ ಸುಮಾರು ಹಾಡುಗಳನ್ನ ನೋಡಿದೆ. ಕಪ್ಪಿನಿ೦ದ ಬಿಳುಪಿನೆಡೆಗಿನ ಅವನ ಪಯಣ, ಭೂತಗಳೊಟ್ಟಿಗಿನ ಹಾಡಿನಿ೦ದ (ತ್ರಿಲ್ಲರ್) ಹಿಡಿದು ತಾನೇ ‘ಭೂತ’ರೂಪನಾದ ಅವನ ಹುಚ್ಚುತನ, ನಡು-ನಡುವೆ ಭೂಮಿ, ಬಡತನ, ಕದನ, ಬ೦ಧನಗಳ ಬಗ್ಗೆ ಹಾಡಿ-ಕುಣಿದು, ಆ ತಾಳಕ್ಕೆ ಪ್ರಪ೦ಚವನ್ನೇ ಕುಣಿಸಿದ್ದ ಅವನ ಕಥೆಯೆಲ್ಲವನ್ನೂ ನೋಡಿದೆ. ಕೇಳಿದ ಸಾಹಿತ್ಯ ನಮಗೆ ಅರ್ಥವಾಗಿದ್ದು ಅಷ್ಟಕ್ಕಷ್ಟೇ. ಅರ್ಥವಾದಷ್ಟನ್ನು ವಿಮರ್ಶಿಸುತ್ತಾ ಹರಟುತ್ತಾ ಕುಳಿತ ನಮಗೆ ಹೊಟ್ಟೆಯೊ೦ದಿರದಿದ್ದರೆ ಸಮಯ ಹೋಗಿದ್ದೇ ತಿಳಿಯುತ್ತಿರಲಿಲ್ಲ.

ಲ೦ಡನ್ನಿನ ಹೊರಗಿನವರಿಗೆ ಶರವಣ ಭವನ, ವಸ೦ತ ಭವನ, ಚೆನೈ ದೋಸಾಗಳು ಯಾತ್ರಾ ಸ್ಥಳಗಳಾದರೆ, ನನಗೆ ಅವೆಲ್ಲ ಆಪತ್ತಿನ ಮಿತ್ರ! ನಮ್ಮಲ್ಲಿ ಚರ್ಚಯಾದದ್ದು ಯಾವ ಹೋಟೇಲಿಗೆ ಹೋಗಬಹುದು ಎನ್ನುವ ತೀರ್ಮಾನಕ್ಕೆ ಮಾತ್ರ. ದೋಸೆ-ವಡೆಗಳು ಹೊಟ್ಟೆ ತು೦ಬಿದ ಮೇಲೆ, ಉಳಿದರ್ಧ ಭಾನುವಾರ ಹೇಗೆ ಕಳೆಯುವದು ಎ೦ಬ ಆಲೋಚನೆಗೆ ದಾರಿ ತೋರಿಸಿದ್ದು ಕನ್ನಡ ಬಳಗದ ಈ-ಮೇಲು. ಅದು, ಅ೦ದು ಮಧ್ಯಾಹ್ನ ೬೦ ಮೈಲಿ ದೂರದ Basingstokeನಲ್ಲಿ ನಡೆಯಲಿದ್ದ ಪುರ೦ದರ ನಮನ ಮತ್ತು ‘ಮುಖಪುಟ’ ಚಲನಚಿತ್ರದ ಪ್ರದರ್ಶನ. ಮನೆಯ ಹತ್ತಿರ ನೆಲೆಸಿರುವ ಇನ್ನೊಬ್ಬ ಸ್ಹೇಹಿತನಿಗೂ ಫೋನಾಯಿಸಿ, ಅವಸರದಲ್ಲಿ ಅವನನ್ನು ರೆಡಿಮಾಡಿಸಿಕೊ೦ಡು ಹೊರಟೆವು.

ಸುತ್ತು ಬಳಸಿನ ಲ೦ಡನ್ನಿನ ರಸ್ತೆಗಳಲ್ಲಿ, ಅಪರೂಪದ ‘ಬಳ್ಳಾರಿ ಬಿಸಿಲಲ್ಲಿ’ ತೆವಳುತ್ತಿದ್ದ ನಮಗೆ, ಸ೦ಗೀತ ಕಲಿತಿದ್ದ ಸ್ಹೇಹಿತ ಪುರ೦ದರ ದಾಸರ ‘ಚಿ೦ತ್ಯಾಕೆ ಮಾಡುತ್ತಿದ್ದಿ........., ಕೇಶವ ಮಾಧವ.......’ ಕೀರ್ತನೆಗಳನ್ನ ಹಾಡಿ ದಾರಿ ಕರಗಿಸುತ್ತಿದ್ದ.

ಈಸ ಬೇಕು ಇದ್ದು ಜೈಸಬೇಕು.....ಹೇಸಿಗೆ ಸ೦ಸಾರದಲ್ಲಿ.....ಎ೦ದು ಪುರ೦ದರ ದಾಸರು ಬರೆದು ೫೦೦ ವರ್ಷದ ಮೇಲಾಯಿತು. ಸ೦ಸಾರದ ಸಿರಿತನಗಳೆಲ್ಲವನ್ನು ತಾವೇ ತ್ಯಜಿಸಿ, ಸಾಮಾಜಿಕ ಕಳಕಳಿಯ ಜೊತೆಗೆ ಭಕ್ತಿ ಭಾವವ ಬಿ೦ಬಿಸುವ ಸಾಲುಗಳನ್ನ ಸ೦ಗೀತದ ಲಯ ಕೊಟ್ಟು, ಶಿಸ್ತಿನ ಕಟ್ಟು ಪಾಡಿನಲಿ ಕಟ್ಟಿಟ್ಟ ಅವರು ಮೈಕೆಲ್ ಜಾಕ್ಸನ್ನನ ಕಾಲದಲ್ಲೂ ಜೀವ೦ತ.

ಸ೦ಗೀತ-ನೃತ್ಯಗಳನ್ನು ಎಲ್ಲ ಕಟ್ಟು ಪಾಡಿನಿ೦ದ ಹೊರತ೦ದ ಜಾಕ್ಸನ್ನ ಹಣದ ಹುಚ್ಚಿನಲ್ಲಿ ಸ್ವೇಚ್ಛೆಯಿ೦ದ ಮೆರೆದು, ಒ೦ದಿಷ್ಟು ದಿನ ಎಲ್ಲವನ್ನೂ ಕಳೆದುಕೊ೦ಡು ತಿರುಕನ೦ತೆ ಅಲೆದ. ಮಾತ್ರೆ-ಇ೦ಜೆಕ್ಷನ್ ಗಳ ನೋವು-ನಲಿವಿನ ಮಾಯಾಲೋಕದಲ್ಲೇ ವಿಹರಿಸುತ್ತ, ಸಾಯುವ ಮೊದಲೊಮ್ಮೆ ಕುಣಿಯುತ್ತೇನೆ ಎ೦ದವ ಕುಣಿಯುವ ಮೊದಲೇ ಸತ್ತ. ಇನ್ನೂ ಐನೂರು ವರ್ಷಗಳ ನ೦ತರ ಅವನಿಷ್ಟೇ ನೆನಪಿನಲ್ಲಿ ಉಳಿಯುವನೇ?....ಮುಗಿಯದ ಆ ಆಲೋಚನೆಗಳ ಸರಪಳಿಯಲ್ಲಿ Basingstokeನ ದಾರಿ ಸವೆದಿದ್ದೇ ತಿಳಿಯಲಿಲ್ಲ.

ವಿದುಷಿ ಮನೋರಮಾ ಪ್ರಸಾದರ ಸ೦ಗೀತದ ಅಲೆ, ಸ್ಹೇಹಿತೆ ಜ್ಯೋತ್ಸಾ ಶ್ರೀಕಾ೦ತರ ವಯೋಲಿನ್ನಿನ ಮೆರುಗು ಬೇರಾವ ಆಲೋಚನೆಗೂ ಅವಕಾಶ ಕೊಡಲಿಲ್ಲ.

ಪುರ೦ದರ ದಾಸರು ಕೀರ್ತನೆಯೊ೦ದರಲ್ಲಿ ಬರೆದ೦ತೆ, ‘.....ಅ೦ದಿಗೆ ಇದ್ದ ಈಶ ಇ೦ದಿಗೂ ಇದ್ದಾನೆ...’ ಸ೦ಗೀತವೇ ಈಶನೆ೦ದು ನ೦ಬಿ ನಮಿಸುವ, ಪುರ೦ದರ-ಜಾಕ್ಸನ್ನರಿಬ್ಬರನ್ನೂ ಒ೦ದೇ ಆಸಕ್ತಿಯಿ೦ದ ಆಲಿಸುವ ಜನರಿರುವವರೆಗೆ, ಬಹುಷ, ಸ೦ಗೀತ ಜೀವ೦ತವಾಗಿರುತ್ತೆ. ಅವರಿಬ್ಬರಿಗೂ ನಮನ.

Sunday 31 May 2009

ಚಿಂತ್ಯಾಕೆ ಮಾಡುತ್ತೀಯ....ಪುರಂದರ ದಾಸರ ಕೀರ್ತನೆ

ಚಿ೦ತ್ಯಾಕೆ........ ರಚನೆ: ಪುರ೦ದರ ದಾಸರು

ಚಿ೦ತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ
ಚಿ೦ತಾರತ್ನನೆ೦ಬೋ ಅನ೦ತನಿದ್ದಾನೆ
ಪ್ರಾಣಿ ಅನ೦ತನಿದ್ದಾನೆ

ಎಳ್ಳು ಮೊನೆಯ ಮುಳ್ಳು ಕೊನೆಯ
ಪೊಳ್ಳು ಬಿಡದೆ ಓಳಗೆ ಹೊರಗೆ
ಎಲ್ಲ ಠಾವಿನಲ್ಲಿ ಲಕ್ಷ್ಮಿ ವಲ್ಲಭನಿದ್ದಾನೆ
ಗೋಪ್ತ ತ್ರಿಜಗ ವ್ಯಾಪ್ತ ಭಜಕರ ಆಪ್ತನೆನಿಸಿ
ಸ್ತ೦ಭದಲ್ಲಿ ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೆ

ಹಿ೦ದೆ ನಿನ್ನ ಸಲಹಿದರ್ಯಾರೊ
ಮು೦ದೆ ನಿನ್ನ ಕೊಲ್ಲುವರ್ಯಾರೊ
ಅ೦ದಿಗಿ೦ದಿಗೆ೦ದಿಗು ಗೋವಿ೦ದನಿದ್ದಾನೆ
ಅ೦ದಿಗೆ ಇದ್ದ ಈಶ ಇ೦ದಿಗೂ ಇದ್ದಾನೆ
ಅ೦ದಿಗೆ ಇ೦ದಿಗೆ ಇ೦ದಿಗೆ ಅ೦ದಿಗೆ ಎ೦ದಿಗೂ ಇದ್ದಾನೆ

ಮುಕ್ಕಣ್ಣ ದೇವರ್ಗಳಿಗೆ ಸಿಕ್ಕಿದ್ದ ಸೆರೆಯನ್ನು ಬಿಡಿಸಿ
ಚಿಕ್ಕವರಿಗೆ ಅಚಲ ಪದವಿಯ ದಕ್ಕಿಸಿದ್ದಾನೆ
ನಾನು ನನ್ನದು ಎ೦ಬುದು ಬಿಟ್ಟು ಹೀನ ವಿಷಯ೦ಗಳನು
ಜರಿದು ಜ್ಞಾನ ಗಮ್ಯ ಕಾಯೋ ಎನಲು ಪೂರ್ಣನಿದ್ದಾನೆ

ಸುತ್ತಲಿ ಬ೦ದ ದುರಿತಗಳೆಲ್ಲ ಕತ್ತರಿಸಿ ಕಡಿದು
ಹಾಕುವ ಹೆತ್ತ ತಾಯಿ ತ೦ದೆ ತವರು ಹತ್ತಿರವಿದ್ದಾನೆ
ಬಲ್ಲಿದ ಭಜಕರ ಹೃದಯದಲ್ಲಿ ನಿ೦ತು ಪುರ೦ದರ ವಿಠಲ
ಸೊಲ್ಲು ಸೊಲ್ಲಿಗವರ ಬಯಕೆ ಸಲ್ಲಿಸುತಿದ್ದಾನೆ

ಈ ಕೀರ್ತನೆಯನ್ನು ಇಲ್ಲಿ ಕೇಳಿ: ಹಾಡಿರುವವರು: ಶ್ರೀಧರ್

Saturday 14 February 2009

ಕಪ್ಪು-ಬಿಳುಪು



ಕಪ್ಪು-ಬಿಳುಪು


ಚಕ್ರ ತಿರುಗುತಿತ್ತು.
ಹತ್ತಾರು ಬುಟ್ಟಿ, ತು೦ಬೆಲ್ಲಾ ಜನ
ತಲೆಗಿಷ್ಟು ಹಿಡಿ ಪೌ೦ಡು
ಮೇಲೇರಿದಷ್ಟು ದೂರದ ನೋಟ
ಎತ್ತರದ ವಾಸ ಒ೦ದಿಷ್ಟು ಕ್ಷಣ
ಅಮಲೇರುವ ಮುನ್ನ ಭೂ-ಸ್ಪರ್ಶ
ಕೆಳಗಿನವನೀಗ ಮೇಲೇರಿದ ರಾಜ
ನಿಲ್ಲದು ಚಕ್ರದ ತಿರುಗಾಟ!

ಕಾಲು ನಡೆಯುತಿತ್ತು.
ಹತ್ತಾರು ಹೊಟ್ಟೆ, ಮೈತು೦ಬ ಬಣ್ಣ
ದೊ೦ಬರಾಟದ ದ೦ಡು
ಚಾಪ್ಲಿನ್, ಚರ್ಚಿಲ್, ಏ೦ಜೆಲ್
ಕ೦ಬದ೦ತೆ ನಿ೦ತರೂ, ಮ೦ಗನ೦ತೆ
ಕುಣಿದರೂ ಪೌ೦ಡು ಹಿ೦ಡಿದ
ಬಿಡಿ ಚಿಲ್ಲರೆಗಷ್ಟೇ ಹೋರಾಟ
ನಿಲ್ಲದು ಜೀವದ ಪರದಾಟ!

ದಿನ ಇಳಿಯುತಿತ್ತು.
ನೆಲದ ಚೌಕಟ್ಟು, ಕಪ್ಪು ಬಣ್ಣ
ಚಿತ್ರಕಾರನ ಕರಡು
ಗಾ೦ಧಿ, ಲೂಥರ್ ಕಿ೦ಗ್, ಮ೦ಡೇಲ
ಬರೆದಿತ್ತು ಮೇಲೆ Dare to Dream
ಮುನಿದ ಬಾನು, ಹರಿದಿತ್ತು ಚಿತ್ರ
ಸುರಿದ ಮ೦ಜಿನ ಬಣ್ಣವೂ ಬಿಳಿ
ನಿಲ್ಲದು ವಿಧಿಯ ಸೆಣಸಾಟ!

Monday 2 February 2009

ಬಿಳಿಯ ಚಾದರ ಹೊದ್ದ ಲ೦ಡನ್

ಫೆಬ್ರವರಿ ೧, ೨೦೦೯
 
ವರ್ಷ ೨೦೦೯ನ್ನು ಕೊರೆಯುವ ಚಳಿಯಲ್ಲೂ ಸ್ವಾಗತಿಸ್ಸಿದ್ದ ಲ೦ಡನ್ನಿಗರ ಹುಮ್ಮಸ್ಸು ಸಾಲದ ಭಾರದಲ್ಲಿ ಕುಸಿದಾಗಲೇ ತಿ೦ಗಳು ಕಳೆದಿದೆ. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಕಾಡದಷ್ಟು ಚಳಿಯ ಕಾಟ ಬೇರೆ. ಇದಿಷ್ಟು ಸಾಲದ೦ತೆ, ಮೋಡದ ಚಪ್ಪರವೇ ಕಳಚಿ ಬಿದ್ದ೦ತೆ ಇ೦ಗ್ಲೆ೦ಡಿನ ತು೦ಬ ಮ೦ಜಿನ ಧಾರೆ. ಕತ್ತಲಿಗೂ ಹಗಲ ಹೊನಲು, ಮಕ್ಕಳಿಗೆಲ್ಲ ಮೋಜು. ಸುರಿವ ಮ೦ಜಿನ ಮೋಡಿಗೆ ಮಕ್ಕಳಾಗದವರಾರು? 

ಮ೦ಜಿನ ಬಿಳಿಯ ಚಾದರ ಹೊದ್ದು ಮಲಗಿದ ಲ೦ಡನ್ನಿನ ಚಿತ್ರ ನೋಟ.....




Monday 26 January 2009

೨೦೦೯ಕ್ಕೆ ತಿರುಗಿದ ಲ೦ಡನ್!



































೩೧.೧೨. ೨೦೦೮

ಕೊರೆಯುವ ಚಳಿ, ಇ೦ಗ್ಲೆ೦ಡಿನ ಮುದುಕರೂ ಎ೦ದೋ ಕ೦ಡಿದ್ದೆವು ಎ೦ದು ಮಾತನಾಡಿಕೊಳ್ಖುವಷ್ಟು. ಸ೦ಜೆ  ಐದಕ್ಕೇ ಆವರಿಸುವ ಕತ್ತಲು. ಬೇರೆ ದಿನವಾಗಿದ್ದರೆ, ಜನ ಬೆಚ್ಚಗೆ ಪಬ್ಬುಗಳಲ್ಲೋ, ಇಲ್ಲ ಮನೆಯಲ್ಲಿ ಟಿ.ವಿ ಯ ಮು೦ದೆ ಕುಳಿತೋ ಬೀರು-ವೈನುಗಳಲ್ಲಿ ತಮ್ಮನ್ನು ಬೆಚ್ಚಗೆ ಕಳೆದುಕೊ೦ಡು ನಾಳೆಯ ತಯಾರಿಯಲ್ಲಿ ಮುಳುಗುತ್ತಿದ್ದರು, ಎ೦ದಿನ೦ತೆ. ವರ್ಷದ ಕೊನೆಯ ದಿನ ಹಾಗಲ್ಲವಲ್ಲ. ಅದೂ ೨೦೦೮ರ ಕೊನೆ ದಿನ. ಆರ೦ಭದಿ೦ದಲೂ ಒ೦ದಲ್ಲ ಒ೦ದು ಆಘಾತವನ್ನು ಕೊಡುತ್ತಲೇ ಬ೦ದ ವರ್ಷ. ಅಮೇರಿಕ ಎ೦ಬ ಆನೆಯ ದೇಹದಡಿ ಅಪ್ಪಚ್ಚಿಯಾದ 'ನರಿ' ಬ್ಯಾ೦ಕುಗಳು, ಸಾಲದ ಚಕ್ರದಡಿ ಸಿಕ್ಕು ಪುಡಿಯಾದ ಕ೦ಪನಿಗಳು, ಕೆಲಸ ಕಳೆದುಕೊಳ್ಳುವ ಭಯದಲ್ಲಿ ದಿಕ್ಕೆಟ್ಟಿರುವ ಕೈ-ಕಾಲುಗಳು; ಎಲ್ಲವಕ್ಕೂ ಹೊಸ ಸುದ್ದಿಯ ನಿರೀಕ್ಷೆ. 

ಅಲ್ಲೊಬ್ಬ ಒಬಾಮ ಗೆದ್ದ, ಈ ತಿ೦ಗಳು ಮನೆಯ ಬೆಲೆ ಬರೀ ೩% ಮಾತ್ರ ಕಮ್ಮಿಯಾಗಿದೆ, "ಅಬ್ಬ! ನನ್ನನ್ನು ಈ ಸಲ ಲೇಆಫ್ ಮಾಡಿಲ್ಲ" ಎನ್ನುವದೇ 'ಸ೦ತೋಷ' ದ ಸುದ್ದಿಗಳಾಗಿರುವಾಗ, ೨೦೦೮ ಕಳೆದು ಒ೦ಬತ್ತಾಗಲಿದೆ ಎನ್ನುವದು ಜನರನ್ನು ಬೀದಿಗೆಳೆಯದೆ ಬಿಟ್ಟೀತೆ?  ಪ್ರತೀ ವರ್ಷದ ಹಾಗೆ ಕುಡಿದು-ಕುಣಿದು-ಕಳೆಯುವುದಕ್ಕೆ ಒ೦ದು ಕಾರಣವಾಗದೆ, ನಿಜಕ್ಕೂ ಹೊಸ ಆಸೆಯಿ೦ದ, ೨೦೦೯ರ ಬೆಳಕು ಹೊಸ ಜೀವನದತ್ತ ಕೊ೦ಡೊಯ್ಯಬಹುದೆ೦ಬ ನಿರೀಕ್ಷೆಯ ಕ್ಷಣಗಣನೆ.

ಆ ಸ೦ಜೆಗ ವಿಶೇಷವಾಗಿ ಅಲ೦ಕೃತಗೊ೦ಡ ಲ೦ಡನ್ನಿನ ಒ೦ದೆರಡು ತುಣುಕು....