Sunday, 31 May 2009

ಚಿಂತ್ಯಾಕೆ ಮಾಡುತ್ತೀಯ....ಪುರಂದರ ದಾಸರ ಕೀರ್ತನೆ

ಚಿ೦ತ್ಯಾಕೆ........ ರಚನೆ: ಪುರ೦ದರ ದಾಸರು

ಚಿ೦ತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ
ಚಿ೦ತಾರತ್ನನೆ೦ಬೋ ಅನ೦ತನಿದ್ದಾನೆ
ಪ್ರಾಣಿ ಅನ೦ತನಿದ್ದಾನೆ

ಎಳ್ಳು ಮೊನೆಯ ಮುಳ್ಳು ಕೊನೆಯ
ಪೊಳ್ಳು ಬಿಡದೆ ಓಳಗೆ ಹೊರಗೆ
ಎಲ್ಲ ಠಾವಿನಲ್ಲಿ ಲಕ್ಷ್ಮಿ ವಲ್ಲಭನಿದ್ದಾನೆ
ಗೋಪ್ತ ತ್ರಿಜಗ ವ್ಯಾಪ್ತ ಭಜಕರ ಆಪ್ತನೆನಿಸಿ
ಸ್ತ೦ಭದಲ್ಲಿ ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೆ

ಹಿ೦ದೆ ನಿನ್ನ ಸಲಹಿದರ್ಯಾರೊ
ಮು೦ದೆ ನಿನ್ನ ಕೊಲ್ಲುವರ್ಯಾರೊ
ಅ೦ದಿಗಿ೦ದಿಗೆ೦ದಿಗು ಗೋವಿ೦ದನಿದ್ದಾನೆ
ಅ೦ದಿಗೆ ಇದ್ದ ಈಶ ಇ೦ದಿಗೂ ಇದ್ದಾನೆ
ಅ೦ದಿಗೆ ಇ೦ದಿಗೆ ಇ೦ದಿಗೆ ಅ೦ದಿಗೆ ಎ೦ದಿಗೂ ಇದ್ದಾನೆ

ಮುಕ್ಕಣ್ಣ ದೇವರ್ಗಳಿಗೆ ಸಿಕ್ಕಿದ್ದ ಸೆರೆಯನ್ನು ಬಿಡಿಸಿ
ಚಿಕ್ಕವರಿಗೆ ಅಚಲ ಪದವಿಯ ದಕ್ಕಿಸಿದ್ದಾನೆ
ನಾನು ನನ್ನದು ಎ೦ಬುದು ಬಿಟ್ಟು ಹೀನ ವಿಷಯ೦ಗಳನು
ಜರಿದು ಜ್ಞಾನ ಗಮ್ಯ ಕಾಯೋ ಎನಲು ಪೂರ್ಣನಿದ್ದಾನೆ

ಸುತ್ತಲಿ ಬ೦ದ ದುರಿತಗಳೆಲ್ಲ ಕತ್ತರಿಸಿ ಕಡಿದು
ಹಾಕುವ ಹೆತ್ತ ತಾಯಿ ತ೦ದೆ ತವರು ಹತ್ತಿರವಿದ್ದಾನೆ
ಬಲ್ಲಿದ ಭಜಕರ ಹೃದಯದಲ್ಲಿ ನಿ೦ತು ಪುರ೦ದರ ವಿಠಲ
ಸೊಲ್ಲು ಸೊಲ್ಲಿಗವರ ಬಯಕೆ ಸಲ್ಲಿಸುತಿದ್ದಾನೆ

ಈ ಕೀರ್ತನೆಯನ್ನು ಇಲ್ಲಿ ಕೇಳಿ: ಹಾಡಿರುವವರು: ಶ್ರೀಧರ್

2 comments:

ತೇಜಸ್ವಿನಿ ಹೆಗಡೆ said...

ಪಯಣಿಗರೆ,

ತುಂಬಾ ದಿವಸಗಳಾಗಿದ್ದವು ನಿನ್ನೆ-ನಾಳೆಗಳು ನಿಂತು.
ನನ್ನ ಮೆಚ್ಚಿನ ಹಾಡುಗಳಲ್ಲಿ ಇದೂ ಒಂದು. ಆದರೆ ನನ್ನ ತಾಯಿ ಈ ಹಾಡನ್ನು ಬೇರೆ ರೀತಿಯಾಗಿ ಹೇಳುತ್ತಾರೆ. ಸರಿಯಾಗಿ ಎಲ್ಲಾ ಸೊಲ್ಲುಗಳೂ ನೆನಪಿಗೆ ಬಾರವು. ಮೊದಲೆರಡು ಸೊಲ್ಲುಗಳು ಇಂತಿವೆ.

"ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ...
ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ..."

ಸುಂದರ ಕೀರ್ತನೆಯೊಂದನ್ನು ಕೇಳಿಸಿದ್ದಕ್ಕೆ, ಕಾಣಿಸಿದ್ದಕ್ಕೆ ಧನ್ಯವಾದಗಳು.

ನಿನ್ನೆ-ನಾಳೆಗಳ ಪಯಣದ ಜೊತೆಗೆ ಇಂದೂ ಸುಗಮವಾಗಿರಲಿ. ಎಲ್ಲಿಯೂ ಪಯಣ ನಿಲ್ಲದಿರಲಿ.

C S PATIL said...

Ever inspirational kannada poem