ಘಝಲ್:
ನಿನ್ನದೇ ಹೆಸರು
ಸುಳಿಸುಳಿವ ತಿಳಿಗಾಳಿಗೆ ಕಂಪಿಸುವ ಅಲೆಗಳಲಿ ನಿನ್ನದೇ ಹೆಸರು
ಹೊಳೆಹೊಳೆವ ನೀರ ಅಲೆ ಅರಳಿಸುವ ಹೂಗಳಲಿ ನಿನ್ನದೇ ಹೆಸರು
ಎಳೆಎಳೆಯ ಬಿಸಿಲಲಿ ಹೊಸಚಿಗುರು ತೆರೆವ ಶಿಶಿರದ ಆ ಕಿರಣದಲಿ
ಚಿಲಿಪಿಲಿಯ ಇಂಚರದ ಹಕ್ಕಿಗಳ ಹಾಡಿನಲಿ ನಿನ್ನದೇ ಹೆಸರು
ಹನಿಹನಿಸಿ ನೆಲತಣಿಸಿ ಮನಮುದಿಸಿ ಸಾಗುವ ಮುಗಿಲಿನಾ ಮಡಿಲಲಿ
ಬಗೆಬಗೆಯ ಬಣ್ಣದ ಆ ಕಾಮನ ಬಿಲ್ಲಿನಲಿ ನಿನ್ನದೇ ಹೆಸರು
ನೆಗೆನೆಗೆದು ಧುಮಕಿ ಜುಳುಜುಳನೆ ಸರಿಯುವ ನದಿಗಳ ಆ ಬಳುಕಿನಲಿ
ಅಲೆಅಲೆಯ ಅಪ್ಪುಗೆಗೆ ದಡಮಿಡಿವ ಸಾಗರದಲಿ ನಿನ್ನದೇ ಹೆಸರು
ಚಳಿಚಳಿಯ ಇರುಳು ಉಳಿಸಿದ ಇಬ್ಬನಿಯ ಮಸುಕಿನಾ ನಸುಕುಗಳಲಿ
ನೆನೆನೆನೆದು ರಾಧೆಯ ಕರೆಯುವ ಆ ಮುರಳಿಯಲಿ ನಿನ್ನದೇ ಹೆಸರು
ಮುರಳಿ ಹತ್ವಾರ್
೧೯/೦೪/೨೦೨೦
No comments:
Post a Comment