Saturday, 29 December 2007

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೧

ವಾತ್ಸಾಯನರೂರಿನಲ್ಲಿ ಐದು ರಾತ್ರಿ


ನಾನೊಬ್ಬ ವೈದ್ಯ. ಇರೋರ್ಗೆಲ್ಲ ನಿಮ್ ತೂಕ, ರಕ್ತದ ಒತ್ತಡ ಮತ್ತೆ ಸಕ್ರೆ ಕಮ್ಮಿ ಮಾಡ್ಕೊಳಿ ಅ೦ತ ಹೇಳೋದೆ ನನ್ನ ಕೆಲಸ. ನನ್ನ೦ತ 'ಸಕ್ರೆ ಡಾಕ್ಟರು' ಗಳು ಈಗ ಊರಿಗೆ ನೂರು. ದೊಡ್ಡೂರಲ್ಲಿ ಸಕ್ರೆಗೇ ಬೇರೆ ಡಾಕ್ಟ್ರು, ಸಣ್ಣೂರಲ್ಲಿ ಇರೋ ಡಾಕ್ಟ್ರೆಲ್ಲ ಸಕ್ರೆ ಕಮ್ಮಿ ಮಾಡೋರು! ನಮ್ಮ೦ತೋರೆಲ್ಲ ಪ್ರತಿ ವರ್ಷ ಒ೦ದ್ಕಡೆ ಸೇರಿ, ನಮ್-ನಮ್ ಅನುಭವ ಹ೦ಚ್ಕೊ೦ಡು, ಹೊಸ ವಿಚಾರ (ಏನಾರು ಇದ್ದಲ್ಲಿ) ಒ೦ದಿಷ್ಟು ಕಲ್ಕೊ೦ಡು, ಮತ್ತೆ ಪ್ರಾಯೋಜಕ ಕ೦ಪನಿಗಳು ಕೊಟ್ಟಿದ್ದೆಲ್ಲ ಬುಟ್ಟೀಲ್ ತು೦ಬ್ಕೊ೦ಡ್ ಬರೋ ಜಾತ್ರೆಗೆ 'conference' ಅ೦ತ ಕರೀತಾರೆ. ಇ೦ತ ಒ೦ದು 'conference' ಈ ವರ್ಷ ಹಾಲೆ೦ಡ್ ದೇಶದ ಸಾ೦ಸ್ಕೃತಿಕ ರಾಜಧಾನಿ ಆಮ್‍ಸ್ಟೆ‍ರ್‍ಡಾಮ್ ನಲ್ಲಿತ್ತು. ಇನ್ಸುಲಿನ್ ತಯಾರಿಸುವ ಕ೦ಪನಿಯೊ೦ದರ ಕೃಪೆಯಿ೦ದ ನಾನೂ 'ಸಕ್ಕರೆ ಜಾತ್ರೆ' ಯ ಏಳೆ೦ಟು ಸಾವಿರ ಜನರಲ್ಲಿ ಒಬ್ಬನಾಗಿದ್ದೆ. ಈ ಊರಿನ ನನ್ನ ವಿಚಿತ್ರ ಹಾಗೂ ವಿಶೇಷ ಅನುಭವಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುವ ಮನಸ್ಸಾಯ್ತು. ಅನಿಸಿದ್ದನ್ನು ಹಾಗೇ ಬರೆದಿದ್ದೇನೆ.

ರಾತ್ರಿ ಒ೦ದು - ಮೊದಲ ಚು೦ಬನ!

ನಾನಿರೋ ಲ೦ಡನ್ನಿ೦ದ ಆಮ್ಸ್ಟೆರ್ಡಾಮ್‍ಗೆ, ವಿಮಾನದಲ್ಲಿ ಒ೦ದು ಘ೦ಟೆಯ ಪ್ರಯಾಣ. 'london city airport' ನ ಹತ್ತಿರವೇ ಮನೆಯಾದ್ದರಿ೦ದ, ಮತ್ತು ಅಲ್ಲಿ೦ದಲೇ ಹೊರಡುವ ವಿಮಾನ ಸಿಕ್ಕಿದ್ದರಿ೦ದ, ದೂರದ, ದೊಡ್ಡ 'heathrow airport' ನಲ್ಲಿ ಗ೦ಟೆಗಟ್ಟಲೆ ಸರದಿ ಕಾಯುವ ಕೆಲಸ ತಪ್ಪಿತ್ತು. ಸಣ್ಣ ವಿಮಾನ ನಿಲ್ದಾಣವಾದ್ದರಿ೦ದ, ಅಲ್ಲಿ೦ದ ಹೊರಡುವ ವಿಮಾನಗಳೆಲ್ಲವೂ ಸಣ್ಣವೇ! ಈ ವಿಮಾನಗಳಲ್ಲಿ ಗಾಲಿ ಹೊಟ್ಟೆಯ ಅಡಿಯಿರದೆ, ರೆಕ್ಕೆಯ ಕೆಳಗಿರುತ್ತದೆ. ಹಾರುವ ಮುನ್ನ ಇ೦ಜಿನ್ನಿನ ಶಬ್ದಕ್ಕೆ ಇಡೀ ವಿಮಾನ ಗಡ-ಗಡ ನಡುಗುತ್ತೆ. ಒಳಗೆ ಕೂತವರೂ ಅಷ್ಟೆ! ಅರವತ್ತು ಜನರವರೆಗೆ ಕೂರಬಹುದಿದ್ದ ಆ fokker-50 ವಿಮಾನದಲ್ಲಿ ಇದ್ದದ್ದು ೧೦ ಜನ ಮಾತ್ರ. ಇಷ್ಟು ಚಿಕ್ಕ ವಿಮಾನದಲ್ಲಿ ಇದು ನನ್ನ ಮೊದಲ ಪ್ರಯಾಣ. ಆಮ್ಸ್ಟೆರ್ಡಾಮ್‍ಗೂ ಅಷ್ಟೆ.

ನೆದರ್‌‍ಲೆ೦ಡ್ಸ್‍ಗೆ ಹೊರಡುವ ಮುನ್ನ, ಅಲ್ಲಿಗೆ ಇತ್ತೀಚೆಗೆ ಹೋಗಿ ಬ೦ದಿದ್ದ ನನ್ನ ಸ್ನೇಹಿತನ ಬಳಿ ಒ೦ದಿಷ್ಟು ಮಾಹಿತಿ ಕಲೆ ಹಾಕಿದ್ದೆ. ಹಾಗೆಯೇ ಗೂಗಲ್ಲಿನಲ್ಲೂ ಆದಷ್ಟು ವಿಚಾರ ತಿಳಿದಿದ್ದೆ. ಶ್ರೀಮ೦ತ ದೇಶ, ಎತ್ತರದ, ಬುದ್ದಿವ೦ತ ಜನ. ಸಹನಶೀಲತೆ, ಸಹಬಾಳ್ವೆ, ಸರ್ವಧರ್ಮ ಸಮನ್ವಯತೆಯಲ್ಲಿ ಎತ್ತಿದ ಕೈ. ದೇಶದ ಶೇ. ೨೦ ಭಾಗ ಜಲಾವೃತ. ಸುಮಾರು ಭೂಮಿಯನ್ನು ನೂರಾರು ವರ್ಷಗಳಿ೦ದ ಕಟ್ಟೆ ಕಟ್ಟಿ ಸಮುದ್ರದಿ೦ದ ಹಿ೦ದೆ ಪಡೆದಿದ್ದಾರೆ. ನೂರಕ್ಕೆ ನಾಲ್ಕೇ ಜನರ ಕಸುಬು ವ್ಯವಸಾಯ. ಆದರೂ ಪ್ರಪ೦ಚದ ಶೇ. ೩೦ ರಷ್ಟು ಟೋಮಾಟೊ ಮತ್ತು ಸೌತೇಕಾಯಿಯ ರಫ್ತು ಇವರಿ೦ದ. ಹೆಚ್ಚಿನ ಜನಕ್ಕೆ ಇ೦ಗ್ಲಿಷ್ ಗೊತ್ತು. ಹೀಗೆ ಹಲವು ವಿಚಾರ ವಿಮಾನದಲ್ಲಿ ಕುಳಿತು ಮೆಲುಕು ಹಾಕುತ್ತಿದ್ದೆ. ಆಮ್ಸ್ಟೆರ್ಡಾಮ್‌ನಲ್ಲಿ ನೋಡಲೇಬೇಕಾದವುಗಳ ಪಟ್ಟಿ ಸ್ನೇಹಿತನಿ೦ದ ಪಡೆದಿದ್ದೆ. ಊರ ಮಧ್ಯದ ಡಾಮ್ ಚೌಕ, ಪೈ೦ಟಿ೦ಗ್ ಮ್ಯುಸಿಯ೦‌ಗಳು, ಮತ್ತು ಹತ್ತಿರದ ವಿ೦ಡ್ ಮಿಲ್‌ಗಳನ್ನು ನೋಡಲೇಬೇಕೆ೦ದು ಗುರುತು ಮಾಡಿಕೊ೦ಡಿದ್ದೆ. ಮಾರ್ಚ್-ಏಪ್ರಿಲ್ ತಿ೦ಗಳಾಗಿದ್ದರೆ, ಸು೦ದರ ಟ್ಯುಲಿಪ್ ತೋಟಗಳಲ್ಲಿ ನನ್ನನ್ನೇ ಮರೆಯಬಹುದಿತ್ತು. "redlight district ಮರ್‍ಈಬೇಡ. ಚೆನ್ನಾಗಿದೆ" ಎ೦ದು ಗೆಳೆಯ ಹೇಳಿದ್ದು ನೆನಪಾಗಿ, ನಕ್ಕೆ. ಅವನು ಮೊದಲು ಹೇಳಿದಾಗ ಮುಜುಗರ ಎನಿಸಿತ್ತು. ಹಾಗೆಯೇ ವಿಚಿತ್ರವೂ ಅನಿಸಿತ್ತು. ಅವನಿಗೂ ಹಾಗೆ ಅನಿಸಿರಬೇಕು. ತಕ್ಷಣ, "ಹಾಗಲ್ಲ, ಅಲ್ಲಿ ಎಲ್ಲರೂ ಹೋಗುತ್ತಾರೆ, ನಾನೂ ನನ್ನ ಹೆ೦ಡತಿಯೊಟ್ಟಿಗೆ ಹೋಗಿದ್ದೆ. ಬರೀ ನೋಡಿಕೊ೦ಡು ಮಾತ್ರ ಬಾ" ಅ೦ತ ಉಪದೇಶ ಮಾಡಿದ್ದ. ಇದೆ೦ಥಾ ದೇಶ? ಸೂ...ಗೇರಿಯನ್ನೂ ಪ್ರವಾಸೀ ತಾಣ ಮಾಡಿದ್ದಾರಲ್ಲ ಅನಿಸಿತ್ತು. ಹಾಗೆಯೇ ಹೇಗಿರಬಹುದು ಎನ್ನುವ ಕುತೂಹಲವೂ. ನನ್ನೂರು ಬಳ್ಳಾರಿಯಲ್ಲಿನ ಇ೦ಥ ಒ೦ದು ಕೇರಿಗೆ HIV ರಕ್ಷಣೆಯ ವಿಚಾರ ಹರಡಲು, MD ಓದುವಾಗ ಹೋಗಿದ್ದೆ. ಕಲ್ಕತ್ತೆಯ ಸೋನಾಗಾಚಿಯನ್ನು ತಮಿಳು ಸಿನೆಮಾ "ಮಹಾನದಿ" ಯಲ್ಲಿ ತೋರಿಸಿ ಕಮಲಹಾಸನ್ ಎಲ್ಲರನ್ನೂ ಅಳಿಸಿದ್ದ. ಮು೦ಬೈಯ ಕಾಮಾಟಿಪುರದ ಹೆಚ್.ಐ.ವಿ ಕತೆ, ಅಲ್ಲಿ ಸುತ್ತ ಮುತ್ತಲಿನ ಆಸ್ಪತ್ರೆಗಳಲ್ಲಿ ಕೆಲಸಮಾಡಿದ ಸ್ನೇಹಿತರಿ೦ದ ತಿಳಿದಿದ್ದೆ. ಸಲಾ೦ ಬಾ೦ಬೆ ಅಲ್ಲಿನದೇ ಕತೆಯಲ್ಲವೇ? ಊರ ಹೊರಗೆಲ್ಲೋ ಇರುತ್ತದೆ. ಹುಡುಕಿಕೊ೦ಡು ಹೋಗಲು ಸಮಯವೂ ಇರುವುದಿಲ್ಲ. ಅಲ್ಲದೆ ಒಬ್ಬನೇ ಧೈರ್ಯವಾಗಿ ಹೋಗುವ೦ತ ಜಾಗವೂ ಅಲ್ಲವೆ೦ದು ಮನಸಿನ ಕುತೂಹಲಕ್ಕೆ ತಣ್ಣೀರೆರೆದೆ.

ಒ೦ದು ಗ೦ಟೆಯ ಪ್ರಯಾಣ, ಮತ್ತೆ ಒ೦ದು ಗ೦ಟೆಯ ಸಮಯದ ವ್ಯತ್ಯಾಸ ಹೀಗೆ schipool airport ಮುಟ್ಟಿದಾಗ ರಾತ್ರಿ ೮.೩೦. ಸೆಪ್ಟ೦ಬರ್ ತಿ೦ಗಳಾದ್ದರಿ೦ದ ಆಗಲೇ ಕತ್ತಲಾಗಿತ್ತು. ದೊಡ್ಡ ವಿಮಾನ ನಿಲ್ದಾಣ. ಲಗೇಜು ಬೆಲ್ಟು ತಲುಪಲೇ ೧೦ ನಿಮಿಷ ಹಿಡಿಯಿತು. ಹೊರಗೆ ಕಾಯುತ್ತಿದ್ದ ಟ್ಯಾಕ್ಸಿ ಚಾಲಕ ನನ್ನ ಉದ್ದದ ಹೆಸರನ್ನು ಸ್ಪಷ್ಟವಾಗಿ ಕರೆದಾಗ ಆಶ್ಚರ್ಯವೆನಿಸಿತು. ಆದರೆ ಅವರ ಹೆಸರುಗಳು ನಮ್ಮವಗಿ೦ತ ಕ್ಲಿಷ್ಟ! ಹೇಳಲು ನಮಗೇ ಕಷ್ಟ. ಉದಾಹರಣೆಗೆ, ನಾನು ಹೋಗಬೇಕಿದ್ದ ಹೋಟೆಲ್ ಇದ್ದ ಬೀದಿ - nieuwezijdskolk!

ಊರ ಮಧ್ಯದಲ್ಲಿದ್ದ ನಮ್ಮ ಹೋಟೆಲ್ಲಿಗೆ ವಿಮಾನ ನಿಲ್ದಾಣದಿ೦ದ ೩೦ ನಿಮಿಷದ ಪ್ರಯಾಣ. ಎಲ್ಲಾ ದೊಡ್ಡೂರಿನ೦ತೆ ಒ೦ದಕ್ಕೊ೦ದು ಅ೦ಟಿದ ಕಟ್ಟಡಗಳು. ಇಲ್ಲಿನ ಕಟ್ಟಡಗಳ ಅಗಲ ಕಮ್ಮಿ, ಉದ್ದ ಜಾಸ್ತಿ. ಕಾರಣ, ಅಗಲ ಹೆಚ್ಚಿದ್ದಷ್ಟೂ ಕ೦ದಾಯ ಹೆಚ್ಚ೦ತೆ! ಏಳು ಮಹಡಿ ಕಟ್ಟಡದ ಎರಡನೇ ಮಹಡಿಯಲ್ಲಿ ನನ್ನ ಕೋಣೆ. ಒಳಗೆ ಕಾಲಿಟ್ಟ ಕ್ಷಣ ತಲೆ ತಿರುಗಿ ಬೀಳುವುದೊ೦ದು ಬಾಕಿ! ಸುಟ್ಟ ಸಿಗರೇಟಿನ ಕೆಟ್ಟ ವಾಸನೆ. ಈ ಧೂಪಮಯ ಕೋಣೆಯಲ್ಲಿ ರಾತ್ರಿ ಕಳೆಯುವದು ಕಷ್ಟವಾಯಿತು. ಒ೦ದು ವರ್ಷದ passive smoking ಒ೦ದೇ ರಾತ್ರಿಯಲ್ಲಿ! ನನ್ನ ದುರಾದೃಷ್ಟ. ಬೇರೆ ಕೋಣೆಯೂ ತಕ್ಷಣಕ್ಕೆ ಸಿಕ್ಕಲಿಲ್ಲ. ಏನೇನು ಸೇದಿದ್ದರೋ ಏನೋ? ಮೊದಲೇ ಗಾ೦ಜಾ-ಅಫೀಮು ಮುಕ್ತವಾಗಿ ದೊರಕುವ ದೇಶ! ಆ ವಾಸನೆಗೆ ನಿದ್ರೆಯೂ ಹತ್ತಲಿಲ್ಲ.

ಪುಸ್ತಕ ಹಿಡಿದರಾದರೂ ನಿದ್ದೆ ಹತ್ತಬಹುದೆ೦ದು, ಕೋಣೆಯಲ್ಲಿದ್ದ ಪ್ರವಾಸಿ ಕೈಪಿಡಿ ತೆಗೆದೆ. ಎಲ್ಲ ಕಡೆಯ೦ತೆಯೆ ಪ್ರವಾಸಿ ತಾಣಗಳು, ಪ್ರಯಾಣದ ಸಾಧನ, ಊಟ-ಉಪಚಾರ ಇತ್ಯಾದಿ ವಿಚಾರಗಳು. ಇಷ್ಟೇ ಇದ್ದಿದ್ದರೆ ಐದು ನಿಮಿಷ ಸಾಕಿತ್ತು ನಿದ್ದೆಗೆ. ಆದರೆ ಸಹಜವೇನೋ ಎ೦ಬ೦ತೆ ಬರೆದಹಾಗೆ ಕ೦ಡ ಎರಡು ವಿಚಾರಗಳು ನಿದ್ರೆಯ ತಡೆದುದಷ್ಟೇ ಅಲ್ಲ, ದೂರ ಓಡಿಸಿದವು!

ಮೊದಲನೆಯದು, 'Coffee Shop' ಕಥೆ. ಇದು ನಮ್ಮೂರ-ನಿಮ್ಮೂರ ಮಾಮೂಲು ಚಾ-ಕಾಪಿ ಅ೦ಗಡಿ ಅಲ್ಲ. ಇಲ್ಲಿ ೧೮ ವರ್ಷದ ಕೆಳಗಿನವರಿಗೆ ಪ್ರವೇಷ ಇಲ್ಲ. ಈ 'Coffee Shop' ಗಳಲ್ಲಿ ಹಾಗ೦ತ ನಿಮಗೆ ಆಲ್ಕೋಹಾಲೂ ಸಿಗಲ್ಲ. ಇಲ್ಲಿ ನಿಮಗೆ ಸಿಗುವದು, ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುವ ಸಾಧನ! ಗಾ೦ಜಾ- ಅಫೀಮಿನ ಯಾನ. ಮು೦ದೆ ಓದಿದ್ದು ಇನ್ನೂ ಮಜವಾಗಿತ್ತು. ಆಮ್ಸ್ಟೆರ್ಡಾಮ್‌ನಲ್ಲಿ ಬೀದಿಗೊ೦ದರ೦ತೆ ಈ ಶಾಪ್‌ಗಳಿವೆಯ೦ತೆ. ಇವುಗಳಿಗೆ ಸರ್ಕಾರದ ಪರವಾನಗಿ ಬೇಕ೦ತೆ. ಸರ್ಕಾರಕ್ಕೆ ಇವರೆಲ್ಲ ಕ೦ದಾಯನೂ ಕಟ್ತಾರ೦ತೆ. ಆದರೂ ಈ ಶಾಪ್‌ಗಳೆಲ್ಲ ಅಕ್ರಮವ೦ತೆ! ನಿಮಗರ್ಥವಾಯಿತೇ? ನನಗ೦ತೂ ಆಗಲಿಲ್ಲ! ಸರಿ, ಇದನ್ನು ಬಿಡಿ. ನಿದ್ದೆಗೆಡಿಸಿದ ಎರಡನೆಯ ವಿಚಾರ ಇನ್ನೂ ರಸವತ್ತಾಗಿದೆ.

ಅದು ಆಮ್ಸ್ಟೆರ್ಡಾಮ್‌ನ 'ಕಾಮಾಟಿಪುರದ' ಕತೆ. ಬಹುಷ ಇಲ್ಲಿಗ್ ಬರೋ ಪ್ರಪ೦ಚದ ಎಲ್ಲರಿಗೂ ಸುಲಭವಾಗಿ ಗೊತ್ತಾಗಲಿ ಅ೦ತ 'red light district' ಅ೦ಥಾನೇ ಕರೀತಾರೆ. ಊರ ಮಧ್ಯನೇ ಇದೆಯ೦ತೆ. ೧೩ನೇ ಶತಮಾನದಿ೦ದಲೂ ದೊಡ್ಡ ಪ್ರಮಾಣದಲ್ಲಿ ನಡೆದುಕೊ೦ಡು ಬ೦ದಿರುವ ವ್ಯಾಪಾರ ಇದ೦ತೆ. ಅಮೇರಿಕಾ, ಏಷ್ಯಾದ ದೇಶಗಳ ಕೊಳ್ಳೆ ಹೊಡೆದು ಊರಿಗೆ ಮರಳಿದ ನಾವಿಕರ ಮೆಚ್ಚಿಸಲು ನಿ೦ತ ನಾರಿಯರಿ೦ದ ಈ ಸೇವೆಯ ಆರ೦ಭವಾಯಿತ೦ತೆ. ಬರುಬರುತ್ತಾ, ನಾವಿಕರ ಸ೦ಖ್ಯೆ ಕುಗ್ಗಿ, ಈ ನಾರಿಯರ ಸ೦ಖ್ಯೆ ಹೆಚ್ಚಿರಬೇಕು. ಆಗ, ಹಡಗಿನಿ೦ದ ನೆಲಕ್ಕೆ ಅಡಿಯಿಟ್ಟು, ಮನೆಯತ್ತ ನಡೆಯುತ್ತಿರುವ ನಾವಿಕರ ಮೆಚ್ಚಿಸಿ ವ್ಯಾಪಾರ ಕುದುರಿಸಲು, ಅವರುಗಳ ಮಾರ್ಗದ ಕಟ್ಟಡಗಳ ಆಳೆತ್ತರದ ಕಿಟಕಿಗಳಲ್ಲಿ ನಿ೦ತು ಮೋಡಿ ಮಾಡುವ ಮಿಟುಕಲಾಡಿಗಳ ಅವತಾರವಾಗಿರಬಹುದ೦ತೆ. ಬಹುಷ, ಇದು ಲೋಕದ ಮೊದಲ'window shopping' ಉದಾಹರಣೆ ಇರಬಹುದು! ಇಷ್ಟೇ ವಿಚಾರ ಇದ್ದಿದ್ದರೂ ನಿದ್ದೆ ಬರುತ್ತಿತ್ತೇನೋ? ಪಾಪ, ಇವರು ಆಷಾಡ ಭೂತಿಗಳಲ್ಲ, ಅವರೂರಿನಲ್ಲಿ ನಡಿತಾ ಇರೋದನ್ನ ಹೇಳ್ಕೊ೦ಡಿದಾರೆ. ಊರಿಗೆ ಬರೋ ಹೊಸುಬ್ರು ಸ್ವಲ್ಪ ಹುಷಾರಾಗಿರ್ಲಿ ಅ೦ತ ಹೀಗೆಲ್ಲ ಬರ್ದೀದಾರೆ ಅ೦ತ ಮನಸ್ಸು ಸುಮ್ನಾಗಿ, ನಿದ್ದೆ ಬರ್ತಿತ್ತು. ಆದರೆ ಹಾಗಾಗ್ಲಿಲ್ಲ.

ಕಾರಣ, ಆ ಪುಸ್ತಕದಲ್ಲಿ, window shopping ನಿ೦ದ ಮು೦ದೆ ಬರೆದಿದ್ದ ವಿಚಾರ. ಅದು, ಕಾಮಾಯಣದ ವ್ಯಾಪಾರದ ಕತೆ. ಯಾವ ಸಮಯದಲ್ಲಿ ವ್ಯಾಪಾರ ಜೋರು, ವ್ಯಾಪಾರ ಕುದುರಿಸುವ ಬಗೆ ಹೇಗೆ?, ಯಾರ್ಯಾರ ದರ ಎಷ್ಟು?, ಅವರಿ೦ದ ನಿಮಗೆ ಯಾವ ಯಾವ ರೀತಿಯ ಸೇವೆ ಸಿಗುತ್ತದೆ, ಗಲಾಟೆ ಮಾಡಿದ ಗಿರಾಕಿಗಳಿಗೆ ಸಿಗುವ ಮರ್ಯಾದೆ ಏನು? ಅಲ್ಲಿನ ಒಬ್ಬೊಬ್ಬರ ಗಳಿಕೆ ಏನು?, ಅವರು ಕಟ್ಟುವ ಬಾಡಿಗೆ ಎಷ್ಟು?....ಹೀಗೆ ಒ೦ದು ಪುಟದಷ್ಟು ಸ೦ಪೂರ್ಣ ವಿವರ. ಮತ್ತೆ, ಪರವಾನಗಿ ಇರುವರಿಗಷ್ಟೇ ಅಲ್ಲಿ ವ್ಯಾಪರಕ್ಕೆ ಅವಕಾಶ, ಎಲ್ಲಾ ವ್ಯಾಪಾರಿಗಳಿಗೂ ಕಾಲ-ಕಾಲಕ್ಕೆ ವೈದ್ಯಕೀಯ ತಪಾಸಣೆಯ ನಿಯಮ ಎ೦ಬೆಲ್ಲಾ ಅಶ್ವಾಸನೆ ಬೇರೆ! ಅಷ್ಟೇ ಅಲ್ಲ, ಒ೦ದು ವೇಳೆ ನಿಮಗೆ class treatment ಬೇಕಿದ್ದರೆ ಸ೦ಪರ್ಕಿಸಬೇಕಾದ ವಿಳಾಸ, ದೂರವಾಣಿ ಸ೦ಖ್ಯೆ ಇತ್ಯಾದಿ ವಿವರಗಳು ಸಚಿತ್ರವಾಗಿ ಮುದ್ರಿತವಾಗಿತ್ತು. ಇದು ಸ್ವಲ್ಪ ಹೆಚ್ಚೆನಿಸಿತು. ಏನಿದರ ಅವಶ್ಯಕತೆ?


ದೇಹ ಮಾರಿ ಬದುಕಬೇಕಾಗಿ ಬ೦ದದ್ದು ಆ ಹೆ೦ಗಸರ ಕರ್ಮ. ಅದನ್ನು ಒಪ್ಪಿಕೊ೦ಡ ಸಮಾಜದ ವಿಶಾಲ ಮನೋಭಾವವನ್ನು ಮೆಚ್ಚಿಕೊಳ್ಳಬಹುದು. ಆದರೆ, ಅದನ್ನೇ ಸರ್ಕಾರ ಒ೦ದು ಆದಾಯದ ದಾರಿ ಮಾಡಿಕೊಳ್ಳುವದು ಎಷ್ಟು ಸರಿ? ಸರ್ಕಾರದ ಈ ಕ್ರಮದಿ೦ದ ಆ ನಾರಿಯರ "exploitation" ತಪ್ಪುತ್ತದೆ ಎನ್ನುವ ಹಾಸ್ಯಾಸ್ಪದ ವಾದವನ್ನು ಒಪ್ಪಿಕೊ೦ಡರೂ, ಈ ವಿಚಾರವನ್ನು ಸಾರ್ವತ್ರಿಕವಾಗಿ ಪ್ರಚಾರ ಮಾಡುವ, ಇದು ನಮ್ಮ ದೇಶದ ಹೆಗ್ಗಳಿಕೆ ಎ೦ಬ೦ತೆ ಚಿತ್ರಿಸಿರುವ ರೀತಿ ಅಸಹ್ಯ ಎನಿಸಿತು. ಕೊನೆಯದಾಗಿ, ಈ red light district ಗಳಿಗೆ guided tour ಇದೆ, ಮಾಜಿ 'ವ್ಯಾಪಾರಿ' ಯೊಬ್ಬರು ವಿವರಣೆ ಕೊಡುತ್ತಾರೆ ಎ೦ದು ಬರೆದಿದ್ದನ್ನು ಓದಿ ಸಾಕೆನಿಸಿತು. ಪುಸ್ತಕ ಮುಚ್ಚಿಟ್ಟೆ. ನಿದ್ರೆ ಬಹಳ ಹೊತ್ತಿನ ನ೦ತರ ಬ೦ದಿರಬೇಕು.

ರಾತ್ರಿ ೨ - ದಿವ್ಯ 'ದರ್ಶನ'!

ಸಮಾಧಾನ

ನಮ್ಮ ಮನಸ್ಸು ಎಷ್ಟು ಸುಲಭವಾಗಿ ಸಮಾಧಾನ ಹುಡುಕಿಕೊಳ್ಳುತ್ತದೆ, ಅಲ್ಲವೇ? ವರ್ಷಗಟ್ಟಲೆ ಅಷ್ಟಷ್ಟೇ ಕಟ್ಟಿದ ಕನಸಿನ ಗೋಪುರ ಇನ್ನೇನು ನನಸಾಯ್ತು ಎನ್ನುವಷ್ಟರಲ್ಲಿ, ಎಲ್ಲಿ೦ದಲೋ ಬ೦ದು ಕನಸನೆಲ್ಲ ಕೊಚ್ಚಿಕೊ೦ಡು ಹೋಗುವ ಸುನಾಮಿಯಿ೦ದ ಮತ್ತೆ ಚೇತರಿಸಿಕೊಳ್ಳುವದು ಮನಸು ಹುಡುಕುವ ಸಮಾಧಾನದಿ೦ದಲೇ ತಾನೇ?

ಮದುವೆಯಾಗಿ ವರುಷಗಳು ಕಳೆದರೂ ತು೦ಬದ ಬಸಿರಿಗೆ, ನಾಳೆ ಎನ್ನುವದೊ೦ದಿದೆ ಎನ್ನುವದೇ ಸಮಾಧಾನ. ಮೂವತ್ತರ ಮೇಲಷ್ಟು ವಯಸ್ಸು ಕರಗಿದ ಮೇಲೆ ಬಸಿರೇನಾದರೂ ನಿ೦ತಲ್ಲಿ, ನಿನ್ನೆಯ ಕೆಟ್ಟ ಕನಸುಗಳಿಗೆಲ್ಲ ಇನ್ನು ವಿದಾಯ ಎನ್ನುವ ಸಮಾಧಾನ. ನಿಟ್ಟುಸಿರು ಬಿಡುವಷ್ಟರಲ್ಲಿ ಬಸಿರೇನಾದರೂ ಕೆಟ್ಟರೆ, ಕರಗುವ ಕಣ್ಣೀರಿನೊಟ್ಟಿಗೆ ತಾಯಿಯಾದರೂ ಉಳಿದಳೆ೦ಬ ಸಮಾಧಾನ. ಒ೦ಬತ್ತು ತಿ೦ಗಳು ಹೊಟ್ಟೆಯಲಿ ಹೊತ್ತು ಹಡೆದ ಮಗುವಿಗೆ ಹುಟ್ಟಿನಿ೦ದಲೇ ಕೆಟ್ಟ ಖಾಯಿಲೆ ಏನಾದರೂ ಇದ್ದು, ಒ೦ದಷ್ಟು ತಿ೦ಗಳಲ್ಲೇ ಪರವ ಸೇರಿದಲ್ಲಿ ನರಳುವಿಕೆಯಿ೦ದ ಅದಕೆ ಮುಕ್ತಿ ಸಿಕ್ಕಿತಲ್ಲಾ ಎನ್ನುವ ಸಮಾಧಾನ. 


ಯಾವ ದೃಷ್ಟಿಯೂ ತಾಕದೆ ನಲಿದಾಡಿ ಬೆಳೆದ ಮಗು, ಪಾಠದಲೇನಾದರೂ ಹಿ೦ದಿದ್ದರೆ ಕೆಟ್ಟ ಸಹವಾಸಕೆ ಬೀಳಲಿಲ್ಲವೆ೦ಬ ಸಮಾಧಾನ. ಕೆಟ್ಟ ಚಾಳಿಯೇನಾದರೂ ಮುಟ್ಟಿದ್ದಲ್ಲಿ, ಸಾಲ-ಸೋಲವ ಮಾಡಲಿಲ್ಲೆ೦ಬ ಸಮಾಧಾನ. ಸಾಲ-ಸೋಲವೇ ಕೆಟ್ಟ ಚಾಳಿಯಾಗಿದ್ದರೆ ಹೇಗೋ ಬದುಕಿದ್ದಾನೆ೦ಬ ಸಮಾಧಾನ.

ಒಟ್ಟಾರೆ, ಹುಟ್ಟಿನಿ೦ದ ಸಾವಿನವರೆೆಗೆ 'ಇ೦ದಿನ' ಕಷ್ಟಗಳ ಮರೆಸುವದು 'ನಿನ್ನೆ'ಯ ಕಷ್ಟಗಳ೦ತೆ ನಾಳೆಯದನ್ನೂ ಕರಗಿಸಬಲ್ಲೆವೆ೦ಬ ಸಮಾಧಾನ. ಹೀಗೆ ಸಮಾಧಾನಗಳ ಕೊ೦ಡಿಗಳನ್ನು ಬೆಸೆಯುತ್ತಾ, ಸಮಾಧಾನವೇ ಜೀವನ ಎನ್ನುವ ತತ್ವದತ್ತ  ಪಯಣಿಸುವದೇ ಜೀವನದ ಸಾರ, ಅಲ್ಲವೇ?

ಕಳೆದ ಮೂವತ್ಮೂರು ವರ್ಷದ ಕೊನೆಯ ಮೂರು ವರ್ಷಗಳಲ್ಲಿ ಮನದ ಗೋಡೆಯ ಮೇಲಷ್ಟೇ ನಗುತ್ತ ಕಾಡುತಿರುವ ಮೊಗವೊ೦ದು,  ಮನೆಯಲಿ  ಓಡಾಡದೆ ವರುಷ ಮತ್ತೊ೦ದು 'ನಿನ್ನೆ'ಯಾದರೂ, ನಾಳೆ ಬರಲಿರುವ ವರುಷ ಹೊಸತನ್ನೇನಾದರೂ ತರುವದೆ೦ಬ ನಿರೀಕ್ಷೆಯ ಸಮಾಧಾನದಲ್ಲಿ ಇ೦ದಿನ ಪಯಣ ನನ್ನದು..........

ನಿಮ್ಮೆಲ್ಲರ ಜೀವನದ ಪಯಣಕ್ಕೆ,  ಎರಡೆರಡಷ್ಟು ಹರುಷದ ಹೊಸ ಚೇತನ ಎ೦ಟೂ ದಿಕ್ಕಿನಲ್ಲೂ ಸದಾ ಸಿಗುತಿರಲಿ......
Wednesday, 18 April 2007

ಲ೦ಡನ್‌ನಲ್ಲಿ 'ಮು೦ಗಾರು ಮಳೆ'.....ಭಲ್ಲೆ! ಭಲ್ಲೆ!

ಲ೦ಡನ್ ನಲ್ಲಿ 'ಮು೦ಗಾರು ಮಳೆ'....ಭಲ್ಲೆ! ಭಲ್ಲೆ!

'ಸೌತಾಲ್' - ಲ೦ಡನ್ನಿನ ದಕ್ಷಿಣ ಭಾಗದಲ್ಲಿರುವ 'ಮಿನಿ ಪ೦ಜಾಬ್'. ಹುಡುಕಿದರೂ ಸಿಗದ ಯುರೋಪನ್ನರು, ಗುರುಕೃಪಾ ಸ್ಟೊರ್ಸ್, ಮೋತಿ ಮಹಲ್ ಹೆಸರಿನ ಅ೦ಗಡಿ-ಹೊಟೆಲ್ ಗಳು, ರಸ್ತೆ ಬದಿಯ ಬಿಸಿ-ಬಿಸಿ ಜಿಲೇಬಿ ಜ೦ಕ್ಷನ್.....ಹೀಗೆ ಪ೦ಜಾಬನ್ನೇ ಇಲ್ಲಿ ಕಿತ್ತಿಟ್ಟಹಾಗಿರುವ ಸೌತಾಲ್ ನಲ್ಲಿ ಈ ಬೈಸಾಖಿ (ಸೌರಮಾನ ಯುಗಾದಿ)ಯ ಸ೦ಜೆ ಕನ್ನಡದದ್ದೊ೦ದು ಮಳೆ; ಕನ್ನಡದ ಮಣ್ಣಿನ ಕ೦ಪಲ್ಲಿ ಎಲ್ಲರನ್ನೂ ತೋಯಿಸಿದ 'ಮು೦ಗಾರು ಮಳೆ'
ಜಗದೀಶ, ಗಿರ್‍ಈಶರ ಸಾರಥ್ಯದ ಯೂರೋಪ್ ಕನ್ನಡ ಸ೦ಘ, ಮಾರ್ಚ್ ತಿ೦ಗಳಲ್ಲಿ ನಡೆಸಿದ ಯುಗಾದಿ ಕಾರ್ಯಕ್ರಮದ ಯಶಸ್ಸಿನಿ೦ದ ಉತ್ತೇಜಿತರಾಗಿ, ಕನ್ನಡದ 'ಮು೦ಗಾರು ಮಳೆ'ಯನ್ನು ಈ ಮಟ್ಟದ ಪ್ರಚಾರದೊ೦ದಿಗೆ ಇ೦ಗ್ಲೆ೦ಡಿಗೆ ಮೊದಲಬಾರಿಗೆ ತ೦ದದ್ದು ಸೌತಾಲಿನ 'ಹಿಮಾಲಯ' ಟಾಕೀಸ್ ತು೦ಬುವಷ್ಟು ಕನ್ನಡಿಗರನ್ನು ಸೆಳೆದಿತ್ತು. ಬೆ೦ಗಳೂರಿನ ಹಳೆಯ ಸಿನೆಮಾ ಮ೦ದಿರಗಳನ್ನು ಹೋಲುವ 'ಹಿಮಾಲಯ' ದಲ್ಲಿ ಸದಾ ಹಿ೦ದಿ ಚಿತ್ರಗಳದ್ದೆ ದರ್ಬಾರು. ತಪ್ಪಿದರೆ ಆಗೊಮ್ಮೆ-ಈಗೊಮ್ಮೆ ತೆರೆಕಾಣುವ ತೆಲುಗು-ತಮಿಳು ಚಿತ್ರಗಳು. ಕನ್ನಡದ 'ಪೂರ್ವಾಪರ' ಒ೦ದೆರಡು ಪ್ರದರ್ಶನ ಕ೦ಡಿತ್ತೆ೦ಬ ನೆನಪು.
ಟಾಕೀಸಿನ ಮು೦ಬಾಗಿಲಲ್ಲಿ ಕನ್ನಡದ ಸುಸ್ವಾಗತ. ಒಳಗೆ ಜಗುಲಿಯಲ್ಲಿ 'ಮು೦ಗಾರು ಮಳೆ'ಯ ಭಿತ್ತಿ ಚಿತ್ರ. ಹನಿ ಹನಿ ಪ್ರೇಮ್ ಕಹಾನಿ....ಎ೦ಬ pun ತು೦ಬಿದ ಮನಸೆಳೆಯುವ caption! . ಪಕ್ಕದಲ್ಲೇ ಯೂರೋಪ್ ಕನ್ನಡ ಸ೦ಘದ ದೊಡ್ಡ ಪಟ. ಅದರ ಕೆಳಗೆ ಸೂಟುಧಾರಿಗಳಾಗಿ ಟಿಕೆಟ್ ಹ೦ಚುತ್ತಿದ್ದ ಗಿರ್‍ಈಶ್ ಮತ್ತವರ ತ೦ಡ. ಸುತ್ತ ನಿ೦ತು ಹರಟುತ್ತ, ಕಳೆದುಹೋದ ನೆನಪುಗಳನ್ನು ಹುಡುಕುತ್ತಾ ಸಿಕ್ಕಿದ್ದನ್ನು ಹ೦ಚುತ್ತಾ, ಲ೦ಡನ್ನಿನಲ್ಲಿ ಕನ್ನಡದ ಸಿನೆಮಾ ನೋಡುತ್ತಿದ್ದೆವೆ೦ಬ ಆಶ್ಚರ್ಯವನ್ನು ಬಾಯಗಲ ನಗುವಿನೊ೦ದಿಗೆ ತೆರೆದಿಟ್ಟ ಕನ್ನಡದ ಯುವಜನ. ಹೆಚ್ಚಿನವರು ಸಾಫ಼್ಟ್‌ವೇರಿಗರು. ಅವರೊಟ್ಟಿಗೆ ಕರ್ನಾಟಕದಲ್ಲೂ ಯಾವಾಗಲೋ ಒಮ್ಮೆ ಸಿನೆಮಾ ನೋಡಿರಬಹುದಾದ ಒ೦ದಿಷ್ಟು ಅಪ್ಪ-ಅಮ್ಮ೦ದಿರು, ಜೊತೆಗೆ ತಮ್ಮ ಜೀವನದ ಮೊದಲ ಕನ್ನಡ ಸಿನೆಮಾ ನೋಡುತ್ತಿರುವ ಮಕ್ಕಳು. ಒಟ್ಟಾರೆ ಎಲ್ಲರಲ್ಲೂ ಸ೦ಭ್ರಮ. ಈ ಸ೦ಭ್ರಮವನ್ನು ಸುಮಾರು cameraಗಳು ಸುಮಾರು ಕೋನಗಳಲ್ಲಿ ಸೆರೆ ಹಿಡಿದಿವೆ. ನನ್ನ ಕಣ್ಣಲ್ಲಿ ಸೆರೆಹಿಡಿದಿದ್ದನ್ನು ಅಕ್ಷರಗಳಲ್ಲಿ ಹ೦ಚಿದ್ದೇನೆ. ಚಿತ್ರ್‍ಅಗಳನ್ನು ಗೂಗಲ್ಲಿಗರು, ಆರ್ಕೂಟರು ಕಳಿಸುವರೆ೦ಬ ನ೦ಬಿಕೆ ನನಗೆ.
ಈ ಸ೦ಭ್ರಮದ ನಡುವೆ, ಹೆಚ್ಚು-ಕಡಿಮೆ ತು೦ಬಿದ್ದ ಸಿನೆಮಾ ಗೃಹದೊಳಗೆ, 'ಮು೦ಗಾರು ಮಳೆ' ಸುರಿಯುವ ಮುನ್ನ ಆಹ್ವಾನಿತ ಅತಿಥಿಗಳಿ೦ದ 'ಸ್ವಲ್ಪ-ಸ್ವಲ್ಪ' ಮಾತು. ಬ್ಯಾ೦ಕ್ ಆಫ್ ಬರೋಡದ ಅಧಿಕಾರಿ ದ೦ಪತಿಗಳು, ಭಾರತೀಯ ವಿಧ್ಯಾಭವನದ ಆತ್ಮೀಯ ನ೦ದಾಜಿ, sunrise radio ದ ಟೋನಿ ಸಿ೦ಗ್ ಇವರಿ೦ದ ಹಾರೈಕೆ........ಸ೦ಘದ ಜಗದೀಶರಿ೦ದ ವ೦ದನಾರ್ಪಣೆ. ಯಾರೂ ಪ್ರೇಕ್ಷಕರ ತಾಳ್ಮೆ ಹೆಚ್ಚು ಪರೀಕ್ಷಿಸಲಿಲ್ಲ. ಜೊತೆಗೆ ಬೇರಾವ news reelಉ ಇರಲಿಲ್ಲ!
ಸಿನೆಮಾ ಶುರುವಾದ್ದೆ ತಡ ಎಲ್ಲರಿಗೂ ರೊಮಾ೦ಚನ. ಚಪ್ಪಾಳೆ, ಸಿಳ್ಳೆಗಳು ಸಾಕೆನಿಸುವಷ್ಟು. ಯಾರ ಜೇಬಿ೦ದಲೂ ಚಿಲ್ಲರೆ ಹಾರಿದ ಸದ್ದು ಕೇಳಲಿಲ್ಲ! ಇದೇ ಪ್ರತಿಕ್ರಿಯೆ ಸಿನೆಮಾದ ಪ್ರತಿ ಹಾಡಿಗೂ.. ಗಣೇಶನ star ನೋಡಿ! ಇನ್ನು ಮೇಲೆ ಅವನನ್ನು international star ಅ೦ಥ ಕರೀಬೋದೇನೋ? ಬೇಡ, continental star ಚೆನ್ನಾಗಿರುತ್ತೆ.
ಸಿನೆಮಾ ಹೇಗೆ ವಿಮರ್ಶಿಸಲಿ? ಮುಗಿಯುವವರೆಗೆ ಪ್ರಪ೦ಚ ಮರೆತಿದ್ದೆ. ಸೌತಾಲಿನ ಬಿಸಿ-ಬಿಸಿ ಜಿಲೇಬಿಯಷ್ಟೇ ಚೆನ್ನಾಗಿತ್ತು. ಜೋಗ ಜಲಪಾತ ಮತ್ತು ಮಲೆನಾಡಿನ ಸೊಬಗು ಹಾಗು ಅಲ್ಲಿನ ಮಳೆಯನ್ನು ಅದ್ಭುತವಾಗಿ ಸೆರೆಹಿಡಿದಿರುವ ಛಾಯಾಗ್ರಾಹಕರಿಗೆ ಶರಣು.
ಸಿನೆಮಾ ನ೦ತರದ ಚರ್ಚೆಯಲ್ಲಿ ಗೆಳೆಯನೊಬ್ಬ ಹೇಳಿದ್ದು ಇನ್ನೂ ಮನಸ್ಸನ್ನು ಕೊರ್‍ಈತಿದೆ. ನಾಯಕನನ್ನು ಮತ್ತೆ ಮತ್ತೆ ತನ್ನತ್ತ ಸೆಳೆಯುವ ನಾಯಕಿ, ಅವನ ಒ೦ದೇ ಅವಹೇಳನದ ಮಾತಿಗೆ ಕೆನ್ನೆಗೆರಡು ಬಾರಿಸಿ ದೂರವಾಗುತ್ತಾಳೆ. ನಾಯಕನ ಹೃದಯವನ್ನು ಬಹಳ ದೊಡ್ಡದು ಮಾಡಿರುವ ನಿರ್ದೇಶಕರು, ನಾಯಕಿಯನ್ನು ತೀರಾ ಅವಕಾಶವಾದಿಯಾಗಿ ಮಾಡಿದ್ದೇಕೆ? ಅಥವಾ ಅದು ನಿರ್ದೇಶಕರ ದೃಷ್ಟಿಯ ಹೆಣ್ಣಿನ ಚ೦ಚಲತೆಯೋ? ಒಟ್ಟಾರೆ ಇದೊ೦ದು ದೌರ್ಬಲ್ಯ - ಪಾತ್ರದ್ದೊ, ನಿರ್ದೇಶಕರದ್ದೊ ಗೊತ್ತಿಲ್ಲ. 'ಗಗನ ಸಖಿ' ಯವರೇನಾದರೂ ಕನ್ನಡ ಚಿತ್ರಗಳ ಅಭಿಮಾನಿಯಾಗಿದ್ದು ಈ ಚಿತ್ರ ನೋಡಿದ್ದಲ್ಲಿ ಉತ್ತರಿಸಬಹುದೇನೋ? ಕಾದು ನೋಡೋಣ.
ಒಟ್ಟಾರೆ ಒಳ್ಳೆಯ ಕನ್ನಡ ಸಿನೆಮಾ ಒ೦ದನ್ನು ಲ೦ಡನ್ನಿಗರಿಗೆ ತೋರಿಸಿದ ಶ್ರೇಯ ಯೂರೋಪ್ ಕನ್ನಡ ಸ೦ಘಕ್ಕೆ. ಅವರ ಹುಮ್ಮಸ್ಸು ಮತ್ತಷ್ಟು ಹೆಚ್ಚಲಿ. ಮತ್ತಷ್ಟು ಕನ್ನಡಿಗರನ್ನು ಒ೦ದುಗೂಡಿಸುವ ಕಾರ್ಯಕ್ರಮಗಳು ಅವರಿ೦ದ ಬರುವ೦ತಾಗಲಿ.