Saturday 14 October 2017

ಮಗಳಿಗೆ-1

ಮುದ್ದು ಮಗಳಿಗೆ,

ದಿನ ತುಂಬಿ ಒಂದಾಗಿತ್ತು
ನಿನ್ನಮ್ಮನಿಗೆ ತಲೆಸುತ್ತು!
ಬರುವ ಅವಸರ ನಿನಗೆ, ಕಳಿಸುವ 
ಆತುರ ಅವಳಿಗಿರಲಿಲ್ಲ!
ಬಗೆದು ಬರಮಾಡಿಕೊಂಡದ್ದಾಯಿತು.
ನಿನ್ನಳುವಿನ ನಗೆ, ನಿನ್ನಮ್ಮನ ನಗೆಯಳು
ನನ್ನ ಭಾವದ ಭಾಷೆಗೆ ನಿಲುಕದ್ದು; ಅರ್ಥ
ಹುಡುಕುವ ಧೈರ್ಯ ನನಗಿಲ್ಲ!

ಕಿಟಕಿಯಾಚೆ, ತೆಮ್ಸ್ ತಣ್ಣಗೆ ಹರಿಯುತಿತ್ತು.
ದಡದಾಚೆಯ ಪಾರ್ಲಿಮೆಂಟಿನೊಳಗೆ ಬ್ರೆಕ್ಸಿಟ್ಟಿನ
ಬೆಂಕಿ ಆರಿಸಲು ನೀರು ಹುಡುಕುತ್ತಿರಬೇಕು
ಮೇ ಮತ್ತವಳ ಬಿಳಿ ಹಿಂಡು! ಸೂರ್ಯ ಮುಳುಗುತ್ತಿದ್ದ
ಪಾರ್ಲಿಮೆಂಟಿನ ಹಿಂದೆ, ಎಂದಿನಂತೆ.
ರಿಪೇರಿಯ ಮೌನದಲಿತ್ತು ಬಿಗ್ ಬೆನ್ ಘಂಟೆ.
ತನ್ನ ಏರಿಳಿತದಾಟಕ್ಕೆ ತೆಮ್ಸ್ ನೆಚ್ಚುವುದು
ಸೂರ್ಯ-ಚಂದ್ರರ ಮಾತ್ರ!

ನಿನ್ನಮ್ಮ-ಅಪ್ಪನ ತವರಿನಲ್ಲಿ, ಚಹಾ ಮಾರಿ ಬೆಳೆದು
ದೇಶದ ಚುಕ್ಕಾಣಿ ಹಿಡಿದ ಜನನಾಯಕನ 
ಹುಟ್ಟು ದಿನದ ಸಂಭ್ರಮ! ನರ್ಮದೆಯ ಹರಿವು
ಬದಲಿಸುವ ಅಡ್ಡಗೋಡೆಯ ಮೇಲೆ ದೀಪ 
ಬೆಳಗಿದ್ದು ಅವನಾಚರಣೆ. ಗೋಡೆಯ ಮೇಲೆ
ಅವನ ನಾಯಕನ ನೂರಾಳೆತ್ತರದ ಕಬ್ಬಿಣದ 
ಗೊಂಬೆಯ ನಿಲ್ಲಿಸುವ ಆಸೆ ಅವನಿಗೆ.
ನರ್ಮದೆ ಕಿಲಕಿಲನೆ ನಕ್ಕಿರಬೇಕು!

ನಿನ್ನ ನಾಳಿನ ನೆಲೆ ಎಲ್ಲೋ? ಬಸವಳಿದ 
ಧರೆಯೋ? ಬೆಳದಿಂಗಳ ದೊರೆಯೋ?
ಮಂಗಳನ ಅಂಗಳದ ಪೊರೆಯೋ?
ನಿನ್ನ ಹರಿವಿನ ಲಹರಿ, ಹಾರುವ ದಿಕ್ಕು ಬದಲಿಸುವ 
ಹುಂಬತನ ನಮಗಿಲ್ಲ. ದಾರಿಯ ಒಪ್ಪ
ಗೊಳಿಸಿ, ದಡವ ಕಟ್ಟುತ ಸಂಕಲ್ಪಿಸವುದಿಷ್ಟೇ:
ನಡೆಸುವೆವು ಕೈ ಹಿಡಿದು ನೀ ನಡೆವೆಡೆಗೆ
ನಿನ್ನರಿವಿನ ಗುರಿಯ ಸಾಗರ ನಿನಗೆ ಸಿಗುವರೆಗೆ.

ಮುರಳಿ ಹತ್ವಾರ್
14.10.2017


Friday 15 September 2017



ಭಾದ್ರಪದದ ಕರಿ ಮೋಡ 

ಹನಿಸುತ ಮಣ್ಣಿನ
ಕರಣವ ತಣಿಸಿ
ಸಂಜೆಯ ಹೊನ್ನಿನ
ಕಿರಣವ ಮಣಿಸಿ
ಕಾಮನ ಬಿಲ್ಲಿನ
ತೋರಣ ಹೆಣಿಸಿ
ಬೀಸುವ ತಂಗಾಳಿಯ ಕೂಡ
ಬೀಗುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಇಂದಿಗೆ ಇರುವಿನ
ನಲಿವನು ತಿಳಿಸಿ
ನಿನ್ನೆಯ ನೆನಪಿನ
ಕಲೆಯನು ಅಳಿಸಿ
ನಾಳೆಗೆ ಒಳಿತಿನ
ಬಲವನು ಉಳಿಸಿ
ಹರಿಯುವ ಹೊನ್ನೀರಿನ ಕೂಡ
ಮೆರೆಯುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಬಣ್ಣದ ಮಳೆಯಲಿ
ನಯನವ ತೊಳೆಸಿ
ರಂಗಿನ ಸೊಬಗಲಿ
ಒಲವನು ಹೊಳೆಸಿ
ಅನುಭವದರಿವಲಿ
ಬದುಕನು ಬೆಳೆಸಿ
ಮೆರೆಸುತ ಅವನಾಟದ ಗೂಡ
ಸರಿಯುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಮುರಳಿ ಹತ್ವಾರ
೧೪. ೦೯. ೨೦೧೭

ಚಿತ್ರ: ತೆಮ್ಸ್ ನದಿಯ ಮೇಲಿನ ಕಾಮನ ಬಿಲ್ಲು