ತಾಜಾ ಸುದ್ದಿ! 'ದ ಗ್ರೇಟ್' ಪತ್ರಕರ್ತ-ಸಂಪಾದಕ-ಮಂತ್ರಿ ಅಕ್ಬರನ ಬಲಿ ಸಿಕ್ಕಿದೆ, ಬೆಳೆಯುತ್ತಿರುವ #MeToo ಬಲೆಗೆ. ಸಿನೆಮಾದ ನಾನಾ ಪಾಟೇಕರ, ಅನು ಮಲ್ಲಿಕ, ಸಾಜಿದ್, ಗಣೇಶ....ಇತ್ಯಾದಿ, ಇತ್ಯಾದಿಗಳು #MeToo ಬೆಳಕಲ್ಲಿ ಬತ್ತಲಾಗಿದ್ದಾರೆ, ಆಗುತ್ತಿದ್ದಾರೆ. ಅಲ್ಲಲ್ಲಿ ಪಾದ್ರಿಗಳು, ಮಠಾಧಿಪತಿಗಳು, ಮುಲ್ಲಾಗಳನ್ನೂ ಮುಲಾಜಿಲ್ಲದೆ #MeToo ಮೆತ್ತಿಕೊಂಡಿದೆ. ಈ ಮೊದಲೇ ಸತ್ತಿರುವ ಹಲವು 'ಅಕ್ಬರರು' ಬದುಕಿದೆವು ಎಂದು ಸಮಾಧಿಯಲ್ಲೇ ನಿಟ್ಟುಸಿರು ಬಿಟ್ಟಿರಬೇಕು. ಅಧಿಕಾರದ ಅಹಂಕಾರದಲ್ಲಿ ಶಿಷ್ಟತೆಯ ಎಲ್ಲೆ ಮೀರಿದ 'ಗಣ್ಯ'ರನೇಕರ ಚಡ್ಡಿಯನ್ನು ಜಾಡಿಸುತ್ತಿರುವ #MeToo ಮೂಮೆಂಟಿನ ಅವಲೋಕನದ ಪ್ರಯತ್ನ ಈ ಲೇಖನ.
#MeToo ಹೊರಕೆಡವುತ್ತಿರುವ ಹೇಸಿಗೆಯ ಕೆಲಸ ತುಂಬಾ ಹಳೆಯದು. White supremacy, slavery, ಸಿಂಹಾಸನ, ಜಮೀನ್ದಾರಿ... ಹೀಗೆ ನಾನಾ ರೂಪಗಳಲ್ಲಿ , ಗಂಡು ಹೆಣ್ಣೆನ್ನದೆ, ಶೋಷಿತರ ಶೀಲ ತಮ್ಮ ಹಕ್ಕೆಂದು ಹರಿದು, ಜರಿದು, ಕರಿದು, ಸುಟ್ಟು, ತಿಂದು ತೇಗಿದವರ 'ಮಹಾಕಾರ್ಯ' ಇತಿಹಾಸದುದ್ದಕ್ಕೂ 'ಹೊಳೆಯುತ್ತಿದೆ'. ಅದೊಂದು ಕೊಳಕು ಸಾಗರ! ಬಗೆ ಬಗೆಯ ಸಂಶೋಧಕರು ತಮ್ಮ-ತಮ್ಮ ಬೊಗಸೆಗಳಲ್ಲಿ ಇದರ ಆಳ ಅಳೆಯಲು ಪ್ರಯತ್ನಿಸಿ ಸೋತರೂ, ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದಾರೆ.
ವಿಜ್ಞಾನಿಗಳು ಗಂಡು ಜೀವದಲ್ಲಿ ಮಾತ್ರ ಇರುವ Y ವಂಶವಾಹಿಯ ಜಾಡು ಹಿಡಿದು ದಾರಿ ಸಿಕ್ಕದೆ ಮುಂದೇನು ಎಂದು ಪ್ರಶ್ನಿಸುತ್ತಿದ್ದಾರೆ; Testosterone (ಟೆಸ್ಟೋಸ್ಟೆರೋನ್) ಹಾರ್ಮೋನ್ ಈ 'ಗಂಡು'ತನದ ಅಡಿಯಿರಬಹುದೇ ಎಂದು ಹುಡುಕಿ ತಳ ಸಿಕ್ಕದೆ ತಳಮಳಿಸಿದ್ದಾರೆ. ಹೆಚ್ಚಿನ ಎಲ್ಲಾ ಪ್ರಾಣಿಗಲ್ಲಿರುವ ಗಂಡು-ಹೆಣ್ಣಿನ ಭೇದಕ್ಕಿಂತ ಮಾನವ ಜೀವ ಭಿನ್ನವಾಗಿಲ್ಲದಿದ್ದರೂ, ಬೇರಾವ ಪ್ರಾಣಿಗಳಲ್ಲೂ ಕಾಣದ ಹೆಣ್ಣಿನೆಡೆಗಿನ ಈ ಭೇದ-ಭಾವದ ಕಾರಣ ವಿಜ್ಞಾನದ ನಿಲುಕಿಗೆ ಇನ್ನೂ ಸಿಕ್ಕಿಲ್ಲ. ಎಲ್ಲಾ ಹಾರ್ಮೋನುಗಳ ಕಾರ್ಯ-ನಿಯಂತ್ರಕ ಮೆದುಳಿನ ಮಧ್ಯವಿರುವ ಹೈಪೊಥಲಮಸ್ಸಿನ ಹಲವು ನಿಯಂತ್ರಕ ಹಾರ್ಮೋನುಗಳ ಕೆಲಸದ ಬಗ್ಗೆ ಹೆಚ್ಚು ತಿಳಿದಾಗ ಗೊತ್ತಾಗಬಹುದೇನೋ. ಕಿಸ್ಪೆಪ್ಟಿನ್ (kisspeptin) ಹೆಸರಿನ ಒಂದು ಹಾರ್ಮೋನು ಮಾನವ ಜಾತಿಯ ಪ್ರೀತಿ, ಸೆಕ್ಸ್ ಮುಂತಾದ ಭಾವನೆಗಳಿಗೂ; ಲೈಂಗಿಕ ಉತ್ತೇಜನ, ಬಸಿರು ಇಂತಹ ಕಾರ್ಯಗಳಿಗೂ ಮೂಲ ಇರಬಹುದೇ ಎಂದು ಹುಡುಕಬಹುದು ಎನ್ನುವಷ್ಟು ಕುರುಹು ಸಿಕ್ಕಿದೆ.
ಮನಶಾಸ್ತ್ರಜ್ನ್ಯರು (psychologists), ಮಾನವರಲ್ಲಿ ಗಂಡು ಹೆಣ್ಣನ್ನು ತನ್ನ ಸ್ವತ್ತೆಂದು ಭಾವಿಸಿರುವುದು ಕಾಲ, ಧಾರ್ಮ, ಅವಕಾಶಕ್ಕನುಗುಣವಾಗಿ ವ್ಯಕ್ತವಾಗುತ್ತಿದೆಯೆಂದು ಅರ್ಥೈಸಿದ್ದಾರೆ. ಕೆಲವೆಡೆ ಮೈ ತುಂಬಾ ಬಟ್ಟೆ ಹಾಕಿಕೊ೦ಡು ಮುಖ ಮುಚ್ಚಿಕೊಳ್ಳಿ ಎನ್ನುವದೂ, ಪರದೆಯ ಹಿಂದೆ ಅಡಗಿರಿ ಎನ್ನುವದೂ; ಕೆಲವೆಡೆ ಬಟ್ಟೆ ಬಿಚ್ಚಿ ಬೇಕಾದಹಾಗೆ ಬಳಸಿಕೊಳ್ಳುವದೂ; ಅಧಿಕಾರ, ಮತ, ಇನ್ನಿತರ ಹಕ್ಕುಗಳಿಂದ ಅವರನ್ನು ದೂರ ಇಡುವದೂ ಇವೆಲ್ಲವೂ ಒಂದೇ ಸ್ವಭಾವದ ವಿವಿಧ ರೂಪಗಳು ಎಂದು ಹೇಳಬಹುದು. ಅಲ್ಲದೆ, ಗಂಡು ತನ್ನ ಲೈಂಗಿಕ ಉತ್ತೇಜನಕ್ಕೂ ಹೆಣ್ಣನ್ನೇ ಅವಲಂಬಿಸಿರುವ ಕಾರಣ, ತನ್ನ ಬೇಕು-ಬೇಡಗಳ ಬಂಧನದಲ್ಲಿ ಹೆಣ್ಣನ್ನು ಕುಣಿಸುತ್ತಾ ಬಂದಿದ್ದಾನೆ. ತನ್ನ 'ಸತ್ತ ನರ'ಕ್ಕೆ ಜೀವ ತುಂಬಲು ದಿನಕ್ಕೊಂದು ೧೮-೨೦ ಪ್ರಾಯದ ಯುವತಿಯರ ಮಾನಭಂಗಕ್ಕೆ ಯತ್ನಿಸುತ್ತಿದ್ದ ಲಿಬ್ಯಾದ ಹಳೆಯ ನಾಯಕ ಗಡ್ಡಾಫಿ ಇದರ ಒಂದು ವಿಪರೀತ ಉದಾಹರಣೆಯಾದರೆ ತನ್ನ 'ಲಿಂಗ' ಸಂಪೂರ್ಣ ಹತೋಟಿಯಲ್ಲಿದೆ ಎಂದು ತೋರಿಸುವ ಚಪಲದಲ್ಲಿ, ತನ್ನ ಇಳಿವಯಸ್ಸಿನಲ್ಲಿ, ತುಂಬು ಪ್ರಾಯದ ಇಬ್ಬರು ಯುವತಿಯರನ್ನ ಬತ್ತಲೆ ಮಲಗಿಸಿ ಅವರ ಮಧ್ಯದಲ್ಲಿ ಸಂಪೂರ್ಣ ಬತ್ತಲಾಗಿ ಮಲಗುತ್ತಿದ್ದ ಭಾರತದ ಸತ್ಯಾನ್ವೇಷಕ ಮಹಾಪುರುಷ ಗಾಂಧೀಜಿ ಇನ್ನೊಂದು ದಿಕ್ಕಿನ ವಿಪರೀತ ಉದಾಹರಣೆ. ಇವೆರಡರ ಮಧ್ಯದಲ್ಲೊಂದು ಸಣ್ಣ ಚುಕ್ಕೆಯಷ್ಟೇ ಈಗ ದೊಡ್ಡದಾಗಿ ಕಾಣುತ್ತಿರುವ #MeToo.
ಬಿಲ್ ಕ್ಲಿಂಟನ್ ತನ್ನ ಆಫೀಸಿನ ಮೋನಿಕೆಯ ಎದುರು ಬತ್ತಲಾಗಿ, ಬಾ ಎಂದು ಕರೆದಾಗ, ಪ್ರಕೃತಿಯ ಪಸಂದಾಗಿಸುವ ಕಾರ್ಯದಲ್ಲಿ ಪರಮನಾಗಿದ್ದ ಪಚೌರಿ ತನ್ನ ಪಂಚೆ ಎಲ್ಲೆಲ್ಲೋ ಬಿಚ್ಚಿದಾಗ, ಸಂಪಾದಕ ತರುಣ ತೇಜಪಾಲ ಲಿಫ್ಟಿನಲ್ಲಿ ಯಾರದೋ ತುಟಿಯೆಡೆಗೆ ತನ್ನ ಆಸೆಯ ನಾಲಿಗೆ ಚಾಚಿದಾಗ...#MeToo ಹೆಸರಿರಲಿಲ್ಲ; ವಿಶ್ವದ ಹಲವೆಡೆ ಚರ್ಚುಗಳ ಶಿಲುಬೆಯಡಿ ಸಾವಿರಾರು ಬಾಲಕರ ಬಾಲ್ಯ ಅಪ್ಪಚ್ಚಿಯಾದಾಗಲೂ ಅಷ್ಟೇ; ಹತ್ತು-ಹನ್ನೆರಡರ ಹೆಣ್ಣುಮಕ್ಕಳನ್ನು ಅವರ ಅಪ್ಪ-ಅಜ್ಜರ ವಯಸ್ಸಿನ ಹೀರೋಗಳು ಮುತ್ತಿಕೊಂಡಾಗಲೂ ಅಷ್ಟೇ; ಇಂಗ್ಲೆಂಡಿನ ವೈದ್ಯನೊಬ್ಬ ತನ್ನನ್ನು ನಂಬಿ ಬಂದ ಪೇಶಂಟುಗಳ ಮೈಮೇಲೆಲ್ಲ ವಿಕೃತಿಯಲ್ಲಿ ಕೈಯಾಡಿಸಿದಾಗಲೂ ಅಷ್ಟೇ. ಆಗಾಗ ಅಲ್ಲಲ್ಲಿ ಕೆಲವು ಪ್ರಸಂಗಗಳು ಪಬ್ಲಿಕ್ ಆದರೂ, ಸಮಾಜ ಅದನ್ನು ಗಾಸಿಪ್ಪಿಗಷ್ಟೇ ಬಳಸಿಕೊಂಡಿತ್ತು. ಒಂದಿಷ್ಟು ನಟಿಯರ, 'ಮಹಾನಟಿ'ಯರ ದುರಂತ ಕಥೆಗಳು ಸಿನೆಮಾಗಳಾಗಿ ಮತ್ತೆ ಕಥೆಗಳಾದವು - ಸಿಲ್ಕ್ ಸ್ಮಿತಾ, ಸಾವಿತ್ರಿ.....ನಿಮ್ಮ ತಲೆಯಲ್ಲೂ ಒಂದಿಷ್ಟು ಹೆಸರು ಓಡುತ್ತಿರಬಹುದು. ಓಡಿಸಿ.
ಈ ಶತಮಾನದ ಆರಂಭದಲ್ಲಿ, ಸೋಶಿಯಲ್ ಮೀಡಿಯಾ ಬೆಳೆದಂತೆ ಹುಟ್ಟಿದ ಹೊಸ-ಹೊಸ ರೂಪಗಳಲ್ಲಿ #MeToo ಒಂದು. ಕೆಲಸದ ಜಾಗಗಳಲ್ಲಿ ಹೆಂಗಸರ ಮಾನಹಾನಿಯ ವಿರುದ್ಧ ಸಣ್ಣದಾಗಿ ಶುರುವಾದ #MeToo ದನಿಗೆ ಬಲ ಬಂದದ್ದು ಇತ್ತೀಚೆಗಷ್ಟೇ. ಹಾಲಿವುಡ್ಡಿನ ದೊಡ್ಡ ಪ್ರೊಡ್ಯೂಸರ್ Weinsteinನ 'ಕರಾಮತ್ತುಗಳು' ಒಂದಾದಮೇಲೊಂದು ಕಳೆದ ಎರಡು ವರ್ಷಗಳಲ್ಲಿ ಬಯಲಾಗುತ್ತಾ ಬಂದಂತೆ, ತಮಗಾದ ಅನ್ಯಾಯದ ಗೋಳಿನ ಕಥೆ ಹೇಳಿಕೊಳ್ಳುವರ ಸಂಖ್ಯೆಯೂ ಹೆಚ್ಚುತ್ತಾ ಬಂತು. ಕೆಲವು ಅಪರಾಧಿಗಳಿಗೆ ಶಿಕ್ಷೆಯಾದದ್ದೂ #MeTooಗೆ ಬಲ ಕೊಟ್ಟಿರಬಹುದು. ಹೀಗೆ ಅಮೆರಿಕೆಯಲ್ಲಿ ಬೆಳೆದ #MeToo, ಪ್ರಪಂಚದ ಹಲವೆಡೆ ಬಲಗೊಳ್ಳುತ್ತಿದೆ. ಸಿನಿಮಾದವರ ಜೊತೆಗೆ ಬೇರೆ-ಬೇರೆ ರಂಗದವರೂ ನಿಧಾನವಾಗಿ ದನಿ ಜೋಡಿಸುತ್ತಿದ್ದಾರೆ - ಒಂದೆರಡು ಕಂಪನಿಗಳ ದೊಡ್ಡ ತಲೆಗಳು ಇತ್ತೀಚಿಗೆ ಉರುಳಿವೆ.
ಎಲ್ಲೆಡೆಯಂತೆ, ಭಾರತದಲ್ಲೂ ಲೈಂಗಿಕ ಶೋಷಣೆ ಸರ್ವವ್ಯಾಪಿ. ಇದು ಮುಟ್ಟದ ರಂಗವಿಲ್ಲ - ಸರ್ಕಾರಿ, ಖಾಸಾಗಿ, ರಾಜಕೀಯ, ಕೋರ್ಟು, ಆಸ್ಪತ್ರೆ, ಶಾಲೆ, ಯೂನಿವರ್ಸಿಟಿ, ನಾಟಕ, ಸಿನೆಮಾ... ಮುಗಿಯದ ಪಟ್ಟಿ. ಸಿನೆಮಾದ ತನುಶ್ರೀ, ನಾನಾ ಪಾಟೇಕರನ ಹೆಸರು ಹೊರಗೆಳೆದು ಭಾರತಕ್ಕೆ ತಂದ #MeTooವನ್ನ, ಮೀಡಿಯಾಗಳು ಕಿಟಕಿ ಮೇಲೆ ಕಿಟಕಿಯಿಟ್ಟು ಖುಷಿಯಿಂದ ಬೆಳೆಸಿವೆ. ನಾ ಮುಂದು-ತಾ ಮುಂದು ಅಂತ #MeToo ಬೋರ್ಡು ಹಿಡಿದು ಕೂಗುತ್ತಿರುವ ಜನ ಆ 'ಕಿಟಕಿ'ಗಳನ್ನ ತುಂಬುತ್ತಿದ್ದಾರೆ. ಟಿವಿಯಾಚೆಗೂ ಹರಿದು, ಠಾಣೆ , ಕೋರ್ಟುಗಳಲ್ಲಿ ಡ್ರಾಮಾ ಮುಂದುವರೆದಿದೆ. ಎಲ್ಲಿಯವರಿಗೆ ಅನ್ನೋದನ್ನ ಕಾದು ನೋಡಬೇಕು.
ಟಿವಿ-ಸಿನೆಮಾದ ಡ್ರಾಮಾದಲ್ಲಿ, ಹೆಸರಿನಾಸೆಗೆ ಒಂದಿಷ್ಟು ಸುಳ್ಳು ಕಥೆಗಳೂ ಹುಟ್ಟಿರಬಹುದು, ಅಥವಾ ಮುಂದೆ ಹುಟ್ಟಬಹುದು. ಆ ಸುಳ್ಳುಗಳನ್ನ ತನ್ನಿಷ್ಟದಂತೆ 'ಅಧಿಕಾರಿ' ಸಮಾಜ ಬಳಸಿಕೊಂಡು, ನಿಜ #MeToo ಸಂತ್ರಸ್ತರು ಹೊರಬಾರದಂತೆಯೂ, ಅವರಿಗೆ ನ್ಯಾಯ ಸಿಗದಂತೆಯೂ, ಮತ್ತೆ #MeToo ಮೂಮೆಂಟು ಕೊಟ್ಟಿರುವ ಸಾಮಾಜಿಕ ಬದಲಾವಣೆಯ ಅವಕಾಶವನ್ನ ಮಟ್ಟ ಹಾಕಲು ಹೊಂಚಿಸಬಹುದು. ಈಗಾಗಲೇ ವಾಟ್ಸಾಪ್ ಗಳಲ್ಲಿ ಗುಂಪಿನಿಂದ-ಗುಂಪಿಗೆ ಹಾರುತ್ತಿರುವ, #MeToo ಬಗ್ಗೆ ಕೇವಲವಾಗಿ ಮಾತಾಡುತ್ತ ಲೇವಡಿ ಮಾಡುತ್ತಿರುವ ಜೋಕುಗಳು, ಜೊತೆಯ ಕಮೆಂಟುಗಳು, ಚರ್ಚೆ ಎಲ್ಲೋ ಹಾದಿ ತಪ್ಪಿದೆ ಎನ್ನಿಸುವಂತೆ ಮಾಡಿವೆ. 'ಆಗ ಮೀಟು, ಮೀಟು ಎಂದವಳು ಈಗ #MeToo' ಎನ್ನುವ ಜೋಕುಗಳಲ್ಲಿ , ಸಿನೆಮಾದ ಹೊರಗೂ, ಹರೆಯ ಮುಟ್ಟದ ಮಕ್ಕಳಿಗೂ ಆಗುತ್ತಿರುವ ಅನ್ಯಾಯಗಳು ಕಳೆದುಹೋಗಿವೆ. ಅಮೆರಿಕೆಯ ಟ್ರಂಪ್, ಕವನ್ನ #MeToo ಹೊರತಾಗಿಯೂ ದೊಡ್ಡ-ದೊಡ್ಡ ಸ್ಥಾನ ಗಳಿಸಿರುವದೂ, ಉಳಿಸಿಕೊಂಡಿರುವದೂ #MeTooಬಗ್ಗೆ ಸ್ವಲ್ಪ ಉದಾಸೀನಕ್ಕೆ ಕಾರಣವಾಗಿದೆ.
ಚರ್ಚೆಯನ್ನು ಸರಿಹಾದಿಗೆ ತಂದೆಳೆಯುವ ಜವಾಬ್ದಾರಿ ದೊಡ್ಡ-ದೊಡ್ಡ ಮೀಡಿಯಾಗಳ ಮೇಲಿದೆ. ಹಾಗೆಯೇ, ರಾಜಕೀಯವನ್ನೆಲ್ಲ ಬದಿಗಿಟ್ಟು, ಈಗಾಗಲೇ ಇರುವ ಕಾನೂನುಗಳನ್ನ ಸರಿಯಾಗಿ ಆಚರಣೆಗೆ ತರುವ, ಆ ಕಾನೂನುಗಳ ಬಲವನ್ನ ಎಲ್ಲೆಡೆ ಪ್ರಚಾರಿಸುವ ಕಾರ್ಯಕ್ಕೆ ಸರ್ಕಾರಗಳು ಮುಂದಾಗಬೇಕಿದೆ. ಕೋರ್ಟುಗಳೂ, ಹೆಂಗಸರನ್ನು-ಮಕ್ಕಳನ್ನು ಬಲಾತ್ಕಾರದ ಭಯದಿಂದ ಬಾಯಿಮುಚ್ಚಿಸುವ, ಹೊರಗಿಡುವ ಜಾಗಗಳಲ್ಲಿ, ಅವರಿಗೆ ಸಮಾನವಾಕಾಶ ಕೊಡಿಸುವಂತ, ಅವರು ಮುಕ್ತವಾಗಿ ಪ್ರವೇಶಿಸುವಂತ ನಿಯಮಗಳನ್ನ ಹಾಕಬೇಕಿದೆ.
ಟಿವಿ-ಪೇಪರ್-ಸೋಶಿಯಲ್ ಮೀಡಿಯಾಗಳಲ್ಲಿ #MeToo #MeToo ತುಂಬಿ ತುಳುಕುತ್ತಿದೆ. ಬಿಹಾರದ ಅನಾಥಾಶ್ರಮಗಳ ಬಾಲಿಕೆಯರ ಗೋಳಿನ ಕಥೆಗಳು ಪಬ್ಲಿಕ್ ಮೆಮೋರಿಯಿಂದ ಆಗಲೇ ಮರೆಯಾಗಿವೆ. ಪಾದ್ರಿಯೊಬ್ಬ ತನ್ನ 'ಕೊಳಕು' ಕೆಲಸವನ್ನು ದೇವರ ಕೆಲಸವೆಂದು ನಾಚಿಕೆಯಿಲ್ಲದೆ ಬೊಬ್ಬಿಡುತ್ತಿದ್ದಾನೆ. ಪೊಲೀಸು ಲಾಕಪ್ಪುಗಳ ಗೋಡೆಗಳ ಮೌನದಲ್ಲಿ ಎಷ್ಟೋ ರಹಸ್ಯಗಳು ಮುಚ್ಚಿಹೋಗಿವೆ. ವಿಧಿಯಿಲ್ಲದೇ ಮನೆ-ಮನೆ ಕೆಲಸ ಮಾಡುವ ಮಕ್ಕಳು, ಯುವತಿಯರು ಬಾಯಿ ಮುಚ್ಚಿಕೊಂಡು ಕಸ ಗುಡಿಸುತ್ತಿದ್ದಾರೆ...... ಯಾವ #MeTooಗಳು ಅವರಿಗೆ ಪರಿಹಾರ ಕೊಡುವುದಿಲ್ಲ.
ನ್ಯೂಜಿಲ್ಯಾಂಡ್ ತನ್ನ ಕ್ರಿಕೆಟಿಗರಿಗೆ ಇತ್ತೀಚಿಗೆ, ಅನುಮತಿ (consent)ಬಗ್ಗೆ ವಿವರವಾಗಿ ತಿಳಿಸಿ, good decision making in sexual relationships ಎನ್ನುವ ಟಾಪಿಕ್ಕಿನಡಿ ಒಂದಿಷ್ಟು ನಿಯಮಗಳನ್ನ ನಿರೂಪಿಸಿದೆ. ಇದೊಂದು ಎಲ್ಲಾ ರಂಗಗಳಲ್ಲೂ ಅಳವಡಿಸಿಕೊಳ್ಳಬಹುದಾದಂತ ಉತ್ತಮ ಉದಾಹರಣೆ. ಸಮಸ್ಯೆ ಇದೆ ಎನ್ನುವದನ್ನ ಒಪ್ಪಿಕೊಂಡಾದ ಮೇಲಷ್ಟೇ ಸಮಾಧಾನ ಹುಡುಕಲು ಸಾಧ್ಯ, ಅಲ್ಲವೇ?
ಹಳೆಯ ಸೀತೆಯಂತೆ, ಆಧುನಿಕ 'ಸೀತೆ'ಯರು, ಮೋಹದಲ್ಲೋ, ಮೋಸದಲ್ಲೋ, ಮಾಯೆಯಲ್ಲೋ, ಮುಗ್ದತೆಯಲ್ಲೋ, ಭಯದಲ್ಲೋ, ಭಕ್ತಿಯಲ್ಲೋ, ಬಡತನದಲ್ಲೋ, ಅಥವಾ ಇನ್ಯಾವ ಕಾರಣಕ್ಕೋ ತಮ್ಮೊಳಗಿನ 'ರಾಮ'ನನ್ನು ದೂರ ಕಳಿಸಿ, ಬೇರಾರೋ ಬರೆದ ಎಚ್ಚರಿಕೆಯ 'ಲಕ್ಷ್ಮಣ ರೇಖೆ'ಯನ್ನ ಅರಿವಿನಿಂದಲೋ, ಅರಿವಿಲ್ಲದೆಯೋ ದಾಟಬಹುದು. ಆದರೆ, ತಂಗಿಗಾದ ಅವಮಾನದ ಸೇಡಿಗೆ ಸೀತೆಯನ್ನ ಅಪಹರಿಸಿದರೂ, ಆಕೆಯನ್ನು ಮುಟ್ಟದ, ಆಕೆಯೆಡೆಗೆ ಕಣ್ಣೆತ್ತಿ ನೋಡದ ಇಪ್ಪತ್ತು ಕಣ್ಣುಗಳ, ಅಹಂಕಾರಿ, ಮಹಾ ಬಲಶಾಲಿ ಅಂದಿನ ಲಂಕಾಸುರ ತನ್ನ ಸುತ್ತ ತಾನೇ ಹಾಕಿಕೊಂಡ ಸಭ್ಯತೆಯ ರೇಖೆಯನ್ನ ಹೇಗೆ ದಾಟಲಿಲ್ಲವೋ ಹಾಗೆ ತಮ್ಮ ಸುತ್ತ 'ರಾವಣ ರೇಖೆ'ಯನ್ನ ಹಾಕಿಕೊಳ್ಳುವ ಜನರ ಸಮಾಜ ಬೆಳೆಯುವವರೆಗೆ #MeToo ಮುಂದುವರಿಯುವ ಕಥೆ.
ನಮ್ಮ ಆಯಸ್ಸಿನ ನಾಳೆಯ ಆಚೆಯಲ್ಲಿ, ಕಂಪ್ಯೂಟರ್-ರೋಬೋಟುಗಳ ಹೊಸ ವಿಶ್ವದಲ್ಲಿ ಗಂಡು ಹೆಣ್ಣನ್ನು ಬಿಟ್ಟು ಅವುಗಳ 'ಒಡೆತನ' ಸಾಧಿಸಲು ಮೊದಲಾಗಬಹುದು; ಆ ಹೋರಾಟದಲ್ಲಿ ಹೆಣ್ಣು ಸಮಭಾಗಿಯಾಗದೆ ವಿಧಿಯಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲೂ ಬಹುದು. ಅಥವಾ ಕೃತಕ ಗರ್ಭಚೀಲದಲ್ಲಿ, ಕೃತಕ ಅಂಡ, ಕೃತಕ ವೀರ್ಯ ಕೂಡಿಸಿ ಗಂಡು-ಹೆಣ್ಣು ಬೇಧವಿಲ್ಲದ ಅರ್ಧನಾರೀಶ್ವರ ಜೀವಗಳ ಸೃಷ್ಟಿಯಾಗಬಹುದು. ಅಲ್ಲಿಯವರೆಗೆ 'ರಾವಣ ರೇಖೆ' ಅವಶ್ಯವಾಗಿ ಬೇಕಿದೆ.
* 'ಸೀತೆ' = ಇಲ್ಲಿ ಇದು ಎಲ್ಲಾ ಲಿಂಗಗಳಿಗೂ (ಗಂಡು, ಹೆಣ್ಣು, ಮತ್ತುಳಿದವರು) ಅನ್ವಯಿಸುವ ನೀರ್ಲಿಂಗ (ಫ್ಲೂಯಿಡ್ ಜೆಂಡರ್) ಪದ