Monday 2 July 2018

ಮಗಳಿಗೆ - ೨

ಮಗಳಿಗೆ - ೨:



ಮಲಗು ಮಲಗು
ಮುದ್ದು ಮಗುವೆ
ನಮ್ಮ ಮನೆಯ
ಚೆಂದದೊಡವೆ
ನಿನ್ನ ನಗುವು
ನಮ್ಮ ಸಿರಿಯು
ನಿನ್ನ ನಲಿವು
ನವಿಲು ಗರಿಯು!

ಮಲಗು...ಮಲಗು...


ಹೊಳೆಹೊಳೆವ ರವಿಯು
ದಣಿದಣಿದು ಹೊರಳಿ
ತಣಿತಣಿವ ನೆರಳು
ಇಳೆಗಿಳಿದು ಉರುಳಿ
ಕುಣಿಕುಣಿವ ತಾರೆ
ಶಶಿಯೊಡನೆ ಅರಳಿ
ಕಳೆಕಳೆಯೆ ಇರುಳು
ಕನಸಿನಲಿ ಮರಳಿ!

ಮಲಗು...ಮಲಗು...


ಇರುಳೊಡತಿ ನಿನ್ನ
ಕರೆಕರೆದು ಚಿನ್ನ
ನಗೆಯುಡುಗೆ ತೊಡಿಸಿ
ಕನಸುಗಳ ಹೊದಿಸಿ
ಇಹಪರವ ಮರೆಸಿ
ಬೆಳೆಸುತಲಿ ಹರಸಿ
ಸರಿಯುವಳು ತೆರೆಗೆ
ಉಷೆ ಹರಿಯೆ ಧರೆಗೆ!

ಮಲಗು...ಮಲಗು...


ಹಳೆತನವ ಹೊಳೆಸೆ
ಎಳೆತನದ ಸಿರಿಯು
ಕನಸುಗಳ ಇರುಳು
ಗೆಲುವಿನೊಳ ದನಿಯು
ಗೆಳೆತನವ ಬೆಳೆಸೆ
ಒಳಿತನದ ಗರಿಯು
ಬೆಳಕುಗಳ ಹಗಲು
ಒಲವಿನೊಳ ಸವಿಯು!


ಮಲಗು...ಮಲಗು...


(೨-೭-೨೦೧೮)










2 comments:

Unknown said...

ಮಗಳಿಗಾಗಿ ಅಪ್ಪನ ಲಾಲಿ ಹಾಡು ತುಂಬಾ ಚೆನ್ನಾಗಿದೆ. 💕💕💕💕👌👌👌👌

Unknown said...

ಮುದ್ದಿನ ಮಗಳಿಗೆ ನಿದಿರೆಯ ಹಾಡು
ಹಾಡುವ ಅಪ್ಪನ ಮಮತೆಯ ಪಾಡು
ಅಪ್ಪಮಗಳ ನೆರಳುಬೆಳಕಿನ ಗೂಡು