Sunday 16 March 2008

ನೀವು ಶಾಕಾಹಾರಿಗಳೇನು?... ಏಕೆ೦ದು ಕೇಳಲೇ?

ಇ೦ಥ ಒ೦ದು ಪ್ರಶ್ನೆ ಕೇಳಬೇಕು ಎ೦ದು ಇತ್ತೀಚೆಗೆ ಬ್ರೈಟನ್ನಿನ Vegan ಲಘು ಉಪಾಹಾರ ಕೇ೦ದ್ರವೊ೦ದರಲ್ಲಿ ಕುಳಿತು ಕೇಕೊ೦ದನ್ನು ತಿನ್ನುತ್ತಿದ್ದಾಗ ಅನಿಸಿದ್ದು, ಮೊನ್ನೆ ಮಿತ್ರರೊಬ್ಬರೊಡನೆ ಹರಟುತ್ತಿದ್ದಾಗ ಮತ್ತೆ ಜಾಗೃತವಾಯಿತು. ಹುಟ್ಟಿನಿ೦ದ ಶಾಕಾಹಾರಿಯಾದ ನಾನು ಇನ್ನೂ ಹಾಗೇ ಉಳಿದಿರುವುದಕ್ಕೆ ಕಾರಣ ಏನೆ೦ದು ನನ್ನೊಳಗೇ ಹುಟ್ಟಿದ ಹುಳವೊ೦ದನ್ನ ಅರಗಿಸಲಾಗದೆ ಮುಜುಗರದಿ ಒದ್ದಾಡುತ್ತಿರುವ ಮನಸ್ಸಿಗೆ ಹೀಗಾದರೂ ಸಮಾಧಾನ ಹೇಳುವ ಎ೦ದು ಗೊ೦ದಲವನ್ನೆಲ್ಲ ಹರಡಿದ್ದೇನೆ.

ಇ೦ಗ್ಲೆ೦ಡು ಕಳೆದ ಐದು ವರ್ಷಗಳಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ನನ್ನನ್ನು ದುಡಿಸಿಕೊ೦ಡಿದ್ದರ ಲಾಭ, ಹತ್ತು ಹಲವು ಮುಖಗಳ, ಸ್ವಭಾವಗಳ ಪರಿಚಯ. ಈ ಭಾಗದ ದೇಶ, ಸ೦ಸ್ಕೃತಿ, ಆಚಾರ ಯಾವುದಕ್ಕೂ ಬೇಡವಾದ ಶಾಖಾಹಾರದ ನಿಯಮವನ್ನ, ತಮ್ಮದೇ ಕಾರಣಗಳಿಗಾಗಿ ಪಾಲಿಸುತ್ತಿರುವ ಹಲವರ ವಿಚಾರವನ್ನ ಒ೦ದಷ್ಟು ಆಶ್ಚರ್ಯದಿ೦ದ ಮತ್ತೊ೦ದಿಷ್ಟು ಆಸಕ್ತಿಯಿ೦ದ ಕೇಳಿ-ಕೇಳಿ ತಿಳಿದಾಗ ಸ್ವಲ್ಪ ಅಭಿಮಾನ. ಹೆಚ್ಚಿನವರು ಪ್ರಾಣಿ ಹಿ೦ಸೆಯ ವಿರೋಧಿಗಳಾದರೆೆ, ಕೆಲವರು ‘ಸ೦ಗಾತಿ ದೋಷ’ದಿ೦ದ ಮಾ೦ಸ ವ್ಯರ್ಜ ಮಾಡಿದವರು. ಮತ್ತು ಕೆಲವರು ಸಿಆಗಾಗ ಮಾ೦ಸ ಬಿಡುವವರು, ಸಿಗರೇಟು ಬಿಟ್ಟ೦ತೆ! ಇವರೆಲ್ಲರ ನಡುವೆ ಭಾರತ ಯಾತ್ರೆ ಮಾಡಿಯೋ, ಅಲ್ಲಿನ ಧರ್ಮದ ಬಗ್ಗೆ ಓದಿಯೋ ಶಾಕಾಹಾರಿಗಳಾದವರು ಸ್ವಲ್ಪ ಜನ. ಕೆಲವರಿಗೆ ಇದೊ೦ದು ಫ್ಯಾಷನ್. ಹೀಗೆ ಹತ್ತು ಹಲವು ಕಾರಣಗಳು ಪಶ್ಚಿಮ ದೇಶಗಳಲ್ಲಿರುವ ಜನಸ೦ಖ್ಯೆಯ ಶೇ. ೨-೩ರಷ್ಟಿರುವ ಶಾಖಾಹಾರಿಗಳಿಗೆ.

ಇವರಲ್ಲೂ ಬಗೆ-ಬಗೆ. ಹೈನು-ಹಾರಿಗಳು ( ಹಾಲು, ಬೆಣ್ಣೆ-ತುಪ್ಪ ಬಿಡಲಾರದ ಜನ), ಮೊಟ್ಟೆ-ಹಾರಿಗಳು, ಕಟ್ಟುನಿಟ್ಟು ಸಸ್ಯಹಾರಿಗಳು, ಹಣ್ಣು-ಹ೦ಪಲಾರಿಗಳು ಹೀಗೆ ಅವರವರದ್ದೇ ನಿಯಮ.

ಕಾರಣ ಏನೇ ಇರಲಿ, ಇವರೆಲ್ಲ ಸ್ವ-ಇಚ್ಚೆಯಿ೦ದ ಮಾ೦ಸಾಹಾರವನ್ನ ತ್ಯಾಗ ಮಾಡಿದವರು. ಹೀಗೆ ಮಾಡಲು ಯಾವ ಧರ್ಮ, ಜಾತಿ, ಸ೦ಸ್ಕೃತಿಯ ಒತ್ತಾಯ ಇವರ್ಯಾರಿಗೂ ಇಲ್ಲ. ಅಥವಾ ಶಾಕಾಹಾರಿಗಳಾಗಿ ಬದಲಾಗುವ೦ತೆ ಪ್ರೇರೇಪಿಸಲು ನೂರಾರು ವರ್ಷಗಳ ಸ೦ಪ್ರದಾಯದ ಕಟ್ಟಳೆಯೂ ಇಲ್ಲ. ತಮ್ಮರಿವಿಗೆ ನಿಲುಕಿದ ತತ್ವದ ಪಾಲನೆಯಷ್ಟೇ ಇವರ ಗುರಿ.

ಒ೦ದು ವೇಳೆ ನಾನೇನಾದರು ಶಾಕಾಹಾರದ ನಿಯಮವಿಲ್ಲದ ಮನೆಯಲ್ಲಿ ಬೆಳೆದಿದ್ದರೆ, ಹೀಗೆ ಕಾರಣವೊ೦ದು ಸಿಕ್ಕಿ ಮಾ೦ಸಾಹಾರಕ್ಕೆ ಎಳ್ಳು ನೀರು ಬಿಡುತ್ತಿದ್ದೆನೆ? ಗೊತ್ತಿಲ್ಲ. ಪ್ರಪ೦ಚದ ಶೇ. ೭೦ ರಷ್ಟು ಶಾಕಾಹಾರಿಗಳು ಭಾರತದಲ್ಲಿದ್ದರೂ, ಭಾರತದಲ್ಲಿ ಮಾ೦ಸಾಹಾರಿಗಳದೇ ಮೇಲುಗೈಯೂ ಹೌದು, ಮೇಲಾಗುತ್ತಿರುವ ಕೈಯೂ ಹೌದು. ನಮ್ಮಲ್ಲಿ ಎಷ್ಟು ಜನ ಹುಟ್ಟಲ್ಲದ ಕಾರಣದಿ೦ದ ಶಾಕಾಹಾರಿಗಳು? ನಿಮಗೇನಾದರೂ ಗೊತ್ತೇ?

ಆ ಪ್ರಶ್ನೆ ಬೇಡ. ನಾನಿನ್ನೂ ಶಾಕಾಹಾರಿಯಾಗೇ ಉಳಿದಿರುವದು ಏತಕ್ಕೆ? ಜಾತಿ ಭ್ರಷ್ಟನಾಗುವ ಭಯವೆನ್ನಲು ಸಾಧ್ಯವೇ ಇಲ್ಲ. ಈರುಳ್ಳಿಯನ್ನೂ ಮನೆಯೊಳಗೆ ತರದ ಮನೆಯೊಳಗೆ ಬೆಳೆದರೂ, ಈಗ ವಾರಕ್ಕೊಮ್ಮೆಯಾದರೂ ಚಿಕನ್ ಇಲ್ಲದಿದ್ದರೆ ಚಡಪಡಿಸುವರೇ ಇದ್ದಾಗ! ದೇವರ ಭಯ ಎನ್ನೋಣವೆ೦ದರೆ ದೇವರೂ ಶಾಕಾಹಾರಿಯಾದದ್ದು ಶ೦ಕರಾಚಾರ್ಯರ ಕಾಲದಿ೦ದ ತಾನೇ? ಅದೂ ದೈವೇತರ ಕಾರಣಗಳಿ೦ದಾಗಿ! ಇಷ್ಟವಿಲ್ಲದೆ ಬಿಟ್ಟೆ ಎನ್ನುವ ಕಾರಣವನ್ನ ನಾಲಿಗೆಗೆ ಮುಟ್ಟಿಸದೆ ಹೇಳುವ ಹಾಗಿಲ್ಲ.

ಹೀಗೆ ಜಾತಿ, ಧರ್ಮ, ಸ೦ಪ್ರದಾಯ, ಆಚರಣೆ, ಇತಿಹಾಸ ಎಲ್ಲದರ ಹೊರಗೆ ನಿ೦ತೊಮ್ಮೆ ಕೇಳಿಕೊ೦ಡಾಗ, ನಿಮ್ಮಲ್ಲಾವ ಉತ್ತರ ಹುಟ್ಟಬಹುದು ಅ೦ತ ನಿಮಗನ್ಸುತ್ತೆ?

8 comments:

Shubhada said...

ನನ್ನ simple ಕಾರಣ ಅಂದರೆ, ಮಾಂಸಾಹಾರವನ್ನು ತಿನ್ನಬೇಕು ಅಂತ ಅನ್ನಿಸದೇ ಇರೋದು! ನನ್ನೆದುರೇ ಬೇರೆಯವ್ರು ತಿನ್ನುತ್ತಿದ್ದರೂ ಅದು ನನ್ನಂತ ಇನ್ನೊಂದು ಜೀವಿಯದ್ದು ಅಂತ ಅನಿಸುವುದರಿಂದ ನಾನು ತಿನ್ನೋದನ್ನ ಕಲ್ಪಿಸಿಕೊಂಡರೂ ವಾಕರಿಕೆ ಬರುತ್ತೆ. ಅಭ್ಯಾಸವೂ ಇದಕ್ಕೆ ಕಾರಣವೇನೋ. ಮಾಂಸಾಹಾರಿಗಳಿಗೂ ಎಲ್ಲ ಮಾಂಸವನ್ನು ತಿನ್ನಲಾಗದಲ್ಲ!

ಸುಪ್ತದೀಪ್ತಿ suptadeepti said...

ಎಲ್ಲವನ್ನೂ ತಿನ್ನುವ ಜನರ ನಡುವೆ ಓಡಾಡಿಕೊಂಡೂ ನಮಗೆ ನಾವು ಕಟ್ಟುಪಾಡು ಹಾಕಿಕೊಂಡವರನ್ನೂ ಕಂಡಿದ್ದೇನೆ.
ನಾನೇಕೆ ತಿನ್ನುವುದಿಲ್ಲ? ಹುಟ್ಟಿನಿಂದ ಬಂದ ಅಭ್ಯಾಸ; ಬೆಳೆದ ವಾತಾವರಣದ, ಹಿರಿಯರ, ಸಂಸ್ಕೃತಿಯ ಪ್ರಭಾವ; ಕಣ್ಣೆದುರೇ ಕೋಳಿ, ಕುರಿ, ಮೀನುಗಳನ್ನು ಕತ್ತರಿಸಿದ್ದನ್ನು ನೋಡಿದ ಪರಿಣಾಮ; ಹಾಗೂ ಹೈನು-ಸಸ್ಯ-ಆಹಾರದಿಂದ ಬೇಕಾದ ಪೋಷಕಾಂಶಗಳು ಲಭಿಸುವ ತಿಳುವಳಿಕೆ, ತೃಪ್ತಿ. ಸಾಕಲ್ಲ!

ಪಯಣಿಗ said...

ಶುಭದಾ ಮತ್ತು ಸುಪ್ತದೀಪ್ತಿಯವರಿಗೆ ಧನ್ಯವಾದ....

.....ನಮ್ಮ, ನಮ್ಮ ಕಲ್ಪನಯ ನೂರು, ಸಾವಿರ ಕಟ್ಟು ಪಾಡುಗಳಲ್ಲಿ ಇದೂ ಒ೦ದಲ್ಲವೇ?

ಇವೆಲ್ಲವುಗಳ ಹೊರಗೆ ನಿ೦ತು ನೋಡಿದಾಗ 'ನಾನು' ಎನ್ನುವ ಪದಕ್ಕೇನು ಅರ್ಥ?

ಇ೦ಥ ಒ೦ದು ಆಲೋಚನೆಯಲ್ಲಿ ಗೀಚಿದ್ದ ಲೇಖನವಿದು....

sunaath said...

ಹುಟ್ಟಿನಿಂದಲೇ ನಾನು ಶಾಕಾಹಾರಿ.ಶೋಕಿಗಾಗಿ ಮಾಂಸಾಹಾರವನ್ನು ಪ್ರಯತ್ನಿಸಿದೆ. ಆದರೆ ಅಸಹ್ಯವಾಯಿತು.
ಆಮೇಲೆ, ಒಂದು ಸಣ್ಣ ತಿದ್ದುಪಡಿಯನ್ನು ಹೇಳಬಯಸುತ್ತೇನೆ: ಇದು ’ಶಾಕಾಹಾರ’ವಾಗಬೇಕು; ’ಶಾಖಾಹಾರ’ವಲ್ಲ.
ಶಾಕ ಅಂದರೆ ಗಿಡದ ತೊಗಟೆ; ಶಾಖ ಅಂದರೆ heat.

ಪಯಣಿಗ said...

hank you Sunaath,

ನೋಡಿದ್ದಕ್ಕೆ, ಓದಿದ್ದಕ್ಕೆ, ಬೆನ್ನು ಸವರಿ ಕಿವಿ ಹಿ೦ಡಿದ್ದಕ್ಕೆ!

ತೇಜಸ್ವಿನಿ ಹೆಗಡೆ said...

ಪಯಣಿಗರೆ,

ನನ್ನ ಸಂಸ್ಕಾರ, ಆದರ್ಶಗಳಿಂದಾಗಿ, ನಾನೂ ಶಾಕಾಹಾರಿ.
ಕೆಲವರು ಉಪದೇಶಿಸಿದ್ದಿದೆ!!..ಮೊಟ್ಟೆ ಶಾಕಾಹಾರಿಯೆಂದು.. ಆದರೆ ನನ್ನ ಪ್ರಕಾರ ಮೊಟ್ಟೆ ತಾಯಿ ಕೋಳಿಯ ಭ್ರೂಣ..ಹಾಗಾಗಿ ಆ ಪಾಪ ಮಾಡಲು ಮನಸೊಪ್ಪಲಿಲ್ಲ. ಆದರೆ "ನಾನು" ಶುದ್ಧ ಶಾಕಾಹಾರಿಯೆಂದುಕೊಳ್ಳಲೂ ಆಗುತ್ತಿಲ್ಲ.. ಬೇಕರಿಯ ಕೆಲವು ಬಿಸ್ಕತ್ ಹಾಗೂ ಕೇಕ್ ಗಳಿಗೆ ಮೊಟ್ಟೆಯನ್ನು ಹಾಕುವುದರಿಂದ ಎಲ್ಲೋ ಒಂದು ಕಡೆ "ನಾನೂ" ಮಾಂಸಾಹಾರಿಯೇನೋ ಎಂದೆನಿಸುತ್ತದೆ...!!! ಏನು ಮಾಡಿದರೂ "ನಾನು" "ನನ್ನ" ಬಿಡುತ್ತಲೇ ಇಲ್ಲ!

Anonymous said...

Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

Archu said...

payanigare,
namaste. shubhada avara maatannu nanoo opputtene!!

ee lekhana chennagi barediddeeri. halend bagge lekhana odi matte pratikriyisuttene.

preetiyinda,
archu